ಬೆಳಗಾವಿ: ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ಇಳಿಮುಖಗೊಂಡಿವೆ. ಹಾಗಾಗಿ ಇದರ ಬಗ್ಗೆ ನಿರ್ಲಕ್ಷ್ಯ ಬೇಡ. ಆರೋಗ್ಯ ಅಧಿಕಾರಿಗಳು ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಮುಂದುವರೆಸುವುದರ ಜತೆಗೆ ಯಾವುದೇ ಸಂದರ್ಭದಲ್ಲಿಯೂ ಜನರಿಗೆ ಸೇವೆ ಒದಗಿಸಲು ಸಿದ್ಧರಿರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಸೂಚನೆ ನೀಡಿದ್ದಾರೆ.
ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸೋಮವಾರ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿನ ಗೋಕಾಕ್, ಚಿಕ್ಕೋಡಿ, ಅಥಣಿ ತಾಲೂಕಿನ ಕೋವಿಡ್-19 ಸಕ್ರಿಯ ಪ್ರಕರಣಗಳ ಹಾಗೂ ಮರಣ ಸಂಖ್ಯೆ ಪ್ರಮಾಣದ ಮಾಹಿತಿ ಪಡೆದುಕೊಂಡರು.
ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 274 ಪ್ರಕರಣಗಳು ಸಕ್ರಿಯವಾಗಿದ್ದು, ಇಲ್ಲಿಯವರೆಗೆ ಒಟ್ಟು 341 ಜನರು ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದರು. ಜಿಲ್ಲೆಯಲ್ಲಿ ಆಕ್ಸಿಜನ್ ಅಭಾವ ಇಲ್ಲ. ಅದೇ ರೀತಿ ಮರಣ ಪ್ರಮಾಣ ಕೂಡ ಶೇ. 97ರಷ್ಟು ತಗ್ಗಿದೆ ಎಂದು ಮಾಹಿತಿ ನೀಡಿದರು.