ಬೆಳಗಾವಿ: ಕೇಂದ್ರ ಮಾಜಿ ಸಚಿವ ಬಾಬಾಗೌಡ ಪಾಟೀಲ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದಿಢೀರ್ ಭೇಟಿಯಾಗಿ ಅಚ್ಚರಿ ಮೂಡಿಸಿದರು.
ಬೆಳಗಾವಿ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದ ಬಾಬಾಗೌಡ ಪಾಟೀಲ ನಿವಾಸಕ್ಕೆ ಆಗಮಿಸಿದ ಡಿ.ಕೆ.ಶಿ ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸುವಂತೆ ಮನವಿ ಮಾಡಿದರು. ಈ ವೇಳೆ ಪಾಟೀಲರು ಕೂಡ ಸಕಾರಾತ್ಮಕವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿರುವ ಬಾಬಾಗೌಡ ಈ ಭಾಗದ ರೈತ ಸಮುದಾಯದ ಮಹಾನ್ ನಾಯಕ. ಕೇಂದ್ರ ಸರ್ಕಾರದ ಕೃಷಿ ವಿರೋಧಿ, ಕಾರ್ಮಿಕ ವಿರೋಧಿ ನೀತಿಗೆ ಜನರು ಬೇಸತ್ತಿದ್ದಾರೆ. ಕೇಂದ್ರದ ಜನ ವಿರೋಧಿ ನೀತಿ ವಿರುದ್ಧ ಪಾಟೀಲರು ಕೂಡ ಹೋರಾಡುತ್ತಿದ್ದಾರೆ. ಅವರ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲವೂ ಇರಲಿದೆ ಎಂದರು.
ಇದನ್ನೂ ಓದಿ: ಸರ್ಕಾರ ನಡೆಸುವುದು ನಮಗೆ ಗೊತ್ತಿದೆ: ಗರಂ ಆದ ಸಿಎಂ
ಪಾಟೀಲರನ್ನು ಭೇಟಿಯಾಗಿ ಬೆಂಬಲ ಪಡೆಯುವಂತೆ ನಮ್ಮ ನಾಯಕರಾದ ರಾಹುಲ್ ಗಾಂಧಿ ಸೂಚನೆ ನೀಡಿದ್ದರು. ದೆಹಲಿ ಪ್ರತಿನಿಧಿಯಾಗಿ ಕೆ.ಎಚ್. ಮುನಿಯಪ್ಪ ಕೂಡ ಪಾಟೀಲರ ಬೆಂಬಲ ಕೋರಲು ನಮ್ಮ ಜೊತೆಗೆ ಬಂದಿದ್ದಾರೆ. ಅವರ ಬೆಂಬಲ ಈ ಚುನಾವಣೆಯಲ್ಲಿ ನಮಗೆ ಸಿಗಲಿದೆ ಎಂದರು.
ಈ ವೇಳೆ, ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ಕಾಂಗ್ರೆಸ್ ಕಿಸಾನ್ ಘಟಕದ ರಾಜ್ಯಾಧ್ಯಕ್ಷ ಸಚಿನ್ ಮೀಗಾ ಇದ್ದರು.