ಬೆಳಗಾವಿ : ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಕೋವಿಡ್-19 ಸೋಂಕಿನಿಂದ ಸಾವು ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್ ಕೆ ಅತೀಕ್ ಹೇಳಿದರು.
ನಗರದ ಪ್ರವಾಸಿಮಂದಿರದಲ್ಲಿ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆರೋಗ್ಯ ಇಲಾಖೆ ಸಿಬ್ಬಂದಿ ಮನೆ ಮನೆಗೆ ತೆರಳಿ ಸಮೀಕ್ಷೆ ಕೈಗೊಂಡು ಉಸಿರಾಟದ ತೊಂದರೆ, ಜ್ವರ ಮತ್ತಿತರ ಸೋಂಕಿನ ಲಕ್ಷಣಗಳು ಗುರುತಿಸಿ ಸೂಕ್ತ ಚಿಕಿತ್ಸೆ ಒದಗಿಸಬೇಕು ಎಂದರು.
ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳು ಸೂಕ್ತ ಮುಂಜಾಗ್ರತೆಯ ಜತೆಗೆ ಸಾರ್ವಜನಿಕರಿಗೆ ವೈದ್ಯಕೀಯ ಸೌಲಭ್ಯ ನೀಡಬೇಕು. ಯಾವುದೇ ರೋಗಿಗೆ ಚಿಕಿತ್ಸೆ ನಿರಾಕರಿಸಬಾರದು. ಕೋವಿಡ್-19 ಸೋಂಕು ಇಲ್ಲದಿರುವವರು ವೈದ್ಯಕೀಯ ಸೌಲಭ್ಯಗಳಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಜಿಲ್ಲಾಡಳಿತದಿಂದ ಕಾರ್ಯಾಗಾರ ಆಯೋಜಿಸುವ ಮೂಲಕ ಕೋವಿಡ್-19 ಹೊರತುಪಡಿಸಿ ಇತರೆ ಪ್ರಕರಣ ನಿರ್ಹಣೆಯ ಬಗ್ಗೆ ಅರಿವು ಮೂಡಿಸಬೇಕು. ಬಿಮ್ಸ್ ಆಸ್ಪತ್ರೆಯಲ್ಲೂ ಗಂಟಲು ದ್ರವದ ಮಾದರಿ ಪರೀಕ್ಷಿಸಲು ಕೂಡಲೇ ಪ್ರಯೋಗಾಲಯ ಆರಂಭಿಸಬೇಕು ಎಂದರು.
ಅಲ್ಲದೇ ಜಿಲ್ಲೆಯ ಮಳೆ-ಬೆಳೆಯ ಪ್ರಮಾಣ ಮತ್ತು ಬೀಜ, ಗೊಬ್ಬರ ಪೂರೈಕೆ ಬಗ್ಗೆ ಕೃಷಿ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರು. ಕಳೆದ ಬಾರಿ ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡಿರುವವರಿಗೆ ಪರಿಹಾರ ವಿತರಣೆ ಮತ್ತು ಮನೆಗಳ ನಿರ್ಮಾಣದ ಕುರಿತು ಚರ್ಚಿಸಿದರು. ಜಿಲ್ಲೆಯ ವಿಶೇಷ ಕೋವಿಡ್-19 ನಿಯಂತ್ರಣಾಧಿಕಾರಿ ರಾಜೇಂದ್ರ ಚೋಳನ್ ಮಾತನಾಡಿ, ಸರ್ಕಾರದ ಮಾರ್ಗಸೂಚಿ ಪ್ರಕಾರ ಸೋಂಕಿತರ ಗಂಟಲು ದ್ರವ ಮಾದರಿಗಳನ್ನು ಮತ್ತೆ ಪ್ರಯೋಗಾಲಯಕ್ಕೆ ಕಳಿಸಲಾಗುತ್ತಿದೆ.
ಸದ್ಯಕ್ಕೆ ಯಾವುದೇ ಒತ್ತಡಗಳಿಲ್ಲ. ಆದ್ದರಿಂದ ವರದಿ ಬೇಗ ಲಭಿಸುತ್ತಿವೆ. ಹೋಮ್ ಕ್ವಾರಂಟೈನ್ ಮಾರ್ಗಸೂಚಿ ಉಲ್ಲಂಘಿಸುವವರನ್ನು ಗುರುತಿಸಿ ಪ್ರಕರಣ ದಾಖಲಿಸಲಾಗುತ್ತಿದೆ. ಅಂತಹವರನ್ನು ಸಾಂಸ್ಥಿಕ ಕ್ವಾರಂಟೈನ್ಗೆ ಕಳಿಸಲು ಪರಿಶೀಲಿಸಲಾಗುವುದು ಎಂದರು. ಜಿಲ್ಲಾಧಿಕಾರಿ ಎಸ್ ಬಿ ಬೊಮ್ಮನಹಳ್ಳಿ, ಜಿಪಂ ಸಿಇಒ ರಾಜೇಂದ್ರ ಕೆ ವಿ, ಬೆಳಗಾವಿ ಪೊಲೀಸ್ ಆಯುಕ್ತ ಬಿ ಎಸ್ ಲೋಕೇಶ್ ಕುಮಾರ್, ಪಾಲಿಕೆಯ ಆಯುಕ್ತರಾದ ಜಗದೀಶ್ ಕೆ ಹೆಚ್ ಇದ್ದರು.