ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಬಿಜೆಪಿ ಶಾಸಕ ಅಭಯ್ ಪಾಟೀಲ ಮಧ್ಯೆ ಪ್ರತಿಷ್ಠೆಯ ಕದನ ಏರ್ಪಟ್ಟಿದೆ. ನಿನ್ನೆ ಸತೀಶ ವಿರುದ್ಧ ಅಭಯ್ ನೇತೃತ್ವದಲ್ಲಿ ರಾಜ್ಯಪಾಲರಿಗೆ ದೂರು ನೀಡಿತ್ತು. ಇಂದು ಸುದ್ದಿಗೋಷ್ಠಿ ನಡೆಸಿದ ಅಭಯ್ ಪಾಟೀಲ ಅವರು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಕಿಡಿಕಾರಿದರು.
''138 ಪೌರ ಕಾರ್ಮಿಕರ ನೇಮಕಾತಿಯಲ್ಲಿ ಭ್ರಷ್ಟಾಚಾರದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಆರೋಪ ಮಾಡಿದ್ದಾರೆ. ಈ ಬಗ್ಗೆ ತಪ್ಪು ಮಾಹಿತಿ ಹರಿದಾಡುತ್ತಿದೆ. ಆರೋಪ ಮಾಡುವವರಿಗೆ ಸಾಮಾನ್ಯ ಜ್ಞಾನ ಇರಬೇಕಿತ್ತು'' ಎಂದು ಶಾಸಕ ಅಭಯ್ ಪಾಟೀಲ ಗುಡುಗಿದರು.
ರಾಜ್ಯಪಾಲರಿಗೆ ಮಾಹಿತಿ ಒದಗಿಸುತ್ತೇವೆ: ''ಬೆಳಗಾವಿಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಇಬ್ಬರು ಮಹಿಳಾ ಅಧಿಕಾರಿಗಳನ್ನು ಮಧ್ಯರಾತ್ರಿ ಠಾಣೆಯಲ್ಲಿ ಕೂರಿಸಿದ್ದಾರೆ. ನಮ್ಮ ಪಾಲಿಕೆ ಸದಸ್ಯರು ಹೋದ ಕೂಡಲೇ ಬಿಟ್ಟು ಕಳುಹಿಸಿದ್ದಾರೆ. ರಾಜ್ಯ ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಂಡಿದೆ. ಈಗಾಗಲೇ ರಾಜ್ಯಪಾಲರಿಗೆ ಲಿಖಿತ ದೂರು ನೀಡಿದ್ದೇವೆ. ಈ ಬೆಳವಣಿಗೆ ಬಗ್ಗೆ ರಾಜ್ಯಪಾಲರಿಗೆ ಮಾಹಿತಿಯನ್ನು ಒದಗಿಸುತ್ತೇವೆ'' ಎಂದರು.
''ಪೌರ ಕಾರ್ಮಿಕರ ನೇಮಕಾತಿಯಲ್ಲಿ ಭ್ರಷ್ಟಾಚಾರದ ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಆರೋಪ ಮಾಡಿದ್ದಾರೆ. ಈ ಕುರಿತು ತಪ್ಪು ಮಾಹಿತಿ ಹರಿದಾಡುತ್ತಿದೆ. ಬೆಳಗಾವಿ ಉತ್ತರ ಶಾಸಕ ರಾಜು ಸೇಠ್ ನಿದ್ದೆ ಕಣ್ಣಲ್ಲಿಯೂ ಈ ಬಗ್ಗೆ ಜಪ ಮಾಡುತ್ತಿದ್ದಾರೆ. 138 ಪೌರ ಕಾರ್ಮಿಕರು ನೇಮಕಾತಿ ಕಾಯಂ ಅಲ್ಲ. ಕೇವಲ ಗುತ್ತಿಗೆದಾರ ಆಧಾರದ ಮೇಲೆ ಪೌರ ಕಾರ್ಮಿಕರ ನೇಮಕಕ್ಕೆ ಅನುಮತಿ ಕೊಡಲಾಗಿದೆ. ಆರೋಪ ಮಾಡುವವರಿಗೆ ಸಾಮಾನ್ಯ ಜ್ಞಾನವಾದರೂ ಇರಬೇಕಿತ್ತು'' ಎಂದು ಕಿಡಿಕಾರಿದರು.
ಸವಾಲು ಹಾಕಿದ ಅಭಯ್ ಪಾಟೀಲ: ''ಪೌರಾಡಳಿತ ಇಲಾಖೆಯ ಅನುಮತಿಯ ಮೇರೆಗೆ ಪೌರ ಕಾರ್ಮಿಕರನ್ನು ನೇಮಕ ಮಾಡಲಾಗಿದೆ. ಶಾಸಕ ರಾಜು ಸೇಠ್ 59ನೇ ಪಾಲಿಕೆ ಸದಸ್ಯರ ರೀತಿ ವರ್ತಿಸುತ್ತಿದ್ದು, ಕಾಂಗ್ರೆಸ್ ಶಾಸಕರಿಗೆ ಅನುಭವದ ಕೊರತೆಯಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಈ ಬಗ್ಗೆ ತನಿಖೆ ಮಾಡಲಿ'' ಎಂದು ಅಭಯ್ ಪಾಟೀಲ ಸವಾಲು ಹಾಕಿದರು.
ಮಾಧ್ಯಮಗೋಷ್ಟಿಯಲ್ಲಿ ಮಾಜಿ ಶಾಸಕ ಅನಿಲ್ ಬೆನಕೆ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ರಾಜ್ಯ ಬಿಜೆಪಿ ವಕ್ತಾರ ಎಂ ಬಿ ಜೀರಲಿ ಹಾಗೂ ಇತರರು ಇದ್ದರು.
ಇದನ್ನೂ ಓದಿ: ಕಲಬುರಗಿಯಲ್ಲಿ ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿ.. ರೆಡ್ ಹ್ಯಾಂಡ್ ಆಗಿ ಬಂಧಿಸಿದ ಪೊಲೀಸರು