ಅಥಣಿ: ಆರ್ಬಿಐ ಪ್ರಮಾಣೀಕೃತ ಕ್ರೆಡಿಟ್ ಆಕ್ಸಿಸ್ ಗ್ರಾಮೀಣ ಲಿಮಿಟೆಡ್, ಗ್ರಾಮೀಣ ಕೂಟ ಫೈನಾನ್ಸಿಯಲ್ ಸರ್ವೀಸ್ ವತಿಯಿಂದ ನೂರಕ್ಕೂ ಹೆಚ್ಚಿನ ಪೌರಕಾರ್ಮಿಕರಿಗೆ ಉಚಿತವಾಗಿ ಆಹಾರ ಸಾಮಗ್ರಿ ಕಿಟ್ ವಿತರಣೆ ಮಾಡಲಾಯಿತು.
ಈ ವೇಳೆ ಗ್ರಾಮೀಣ ಕೂಟದ ಏರಿಯಾ ಮ್ಯಾನೇಜರ್ ಮಂಜುನಾಥ ಕಮ್ಮಾರ ಮಾತನಾಡಿ, ಕೋವಿಡ್-19 ಸಮಯದಲ್ಲಿ ತಾಲೂಕು ಆಡಳಿತ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಪೌರಕಾರ್ಮಿಕರ ಸೇವೆ ಅಪಾರವಾಗಿದೆ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ನಮ್ಮ ಗ್ರಾಮೀಣ ಕೂಟದಿಂದ ಹಲವು ಕಡೆ ಸ್ಯಾನಿಟೈಸರ್ ಮತ್ತು ಮಾಸ್ಕ್ ವಿತರಣೆ ಮಾಡಲಾಗಿದೆ.
ಇಂದು ಅಥಣಿ ಪುರಸಭೆಯ ನೂರಕ್ಕೂ ಅಧಿಕ ಪೌರಕಾರ್ಮಿಕರಿಗೆ ಆಹಾರ ಸಾಮಗ್ರಿ ಕಿಟ್ ವಿತರಿಸಿದ್ದು, ಮುಂಬರುವ ದಿನಗಳಲ್ಲಿ ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪುರಸಭೆ ಮತ್ತು ನಗರಸಭೆಗಳಲ್ಲಿ ಕೆಲಸ ನಿರ್ವಹಿಸುವ ಪೌರಕಾರ್ಮಿಕರಿಗೆ ಕಿಟ್ ವಿತರಣೆ ಮಾಡಲಾಗುವುದು ಎಂದರು.
ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಕವಲಾಪುರ ಮಾತನಾಡಿ, ಕೋವಿಡ್-19 ಸಂದರ್ಭದಲ್ಲಿ ನಮ್ಮ ಪೌರಕಾರ್ಮಿಕರು ತಮ್ಮ ಪ್ರಾಣ ಒತ್ತೆ ಇಟ್ಟು ಕುಟುಂಬ ಸದಸ್ಯರಿಂದ ದೂರ ಉಳಿದು ನಮ್ಮೆಲ್ಲರ ಒಳಿತಿಗಾಗಿ ಶ್ರಮಿಸುತ್ತಿದ್ದು, ಅವರೊಂದಿಗೆ ನಾವು ಇದ್ದೇವೆ ಎಂದರು. ಇಂದು ಗ್ರಾಮೀಣ ಕೂಟದವರು ಕಿಟ್ ವಿತರಿಸುವ ಮೂಲಕ ಕೊರೊನಾ ವಾರಿಯರ್ಸ್ ಆದ ಪೌರಕಾರ್ಮಿಕರಿಗೆ ಧೈರ್ಯ ತುಂಬುವ ಹಾಗೂ ಅವರನ್ನು ಪ್ರೋತ್ಸಾಹಿಸುವ ಕೆಲಸ ಮಾಡಿದ್ದಾರೆ ಎಂದರು.