ಚಿಕ್ಕೋಡಿ/ಬೆಳಗಾವಿ: ಪಕ್ಷಕ್ಕೆ ದ್ರೋಹ ಮಾಡಿ, ಅಧಿಕಾರದ ದಾಹಕ್ಕಾಗಿ ಏನನ್ನು ಮಾಡಲು ಹಿಂಜರಿಯದ, ಹೇಸದ ಅನರ್ಹರನ್ನು ಶಾಶ್ವತವಾಗಿ ಅನರ್ಹರಾಗಿಯೇ ಉಳಿಸ್ತೀವಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಕಾಗವಾಡ ತಾಲೂಕಿನ ಉಗಾರ ಗ್ರಾಮದಲ್ಲಿ ಮಾಧ್ಯಮದವರಿಗೆ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಶೂನ್ಯ ಫಲಿತಾಂಶ ಎಂಬ ಜಗದೀಶ್ ಶೆಟ್ಟರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದರು. ಅವರಿಗೆ ಸುಳ್ಳು ಹೇಳೋದು ರೂಢಿಯಾಗಿದೆ. ಕಾಂಗ್ರೆಸ್ ನಿರ್ನಾಮ ಮಾಡಲು ಯಾರಿಗೂ ಸಾಧ್ಯವಿಲ್ಲ. ಕಾಂಗ್ರೆಸ್ ನಿರ್ನಾಮವಾಗತ್ತೆ ಅಂತ ಹೇಳಿದ್ದವರು ನಿರ್ನಾಮವಾಗಿ ಹೋಗ್ತಾರೆ. ಸಿದ್ದರಾಮಯ್ಯ ಏಕಾಂಗಿ ಅಲ್ಲ, ನಾವೆಲ್ಲ ಸಿದ್ದರಾಮಯ್ಯನವರ ಜೊತೆ ಇದ್ದೇವೆ. ಪಕ್ಷದಲ್ಲಿ ನಾವೆಲ್ಲಾ ಒಗ್ಗಟ್ಟಾಗಿದ್ದೇವೆ. ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಇದು ಬರಿ ಮಾಧ್ಯಮಗಳ ಸೃಷ್ಟಿ ಎಂದ್ರು.
ಸಿದ್ದರಾಮಯ್ಯನವರ ಹತ್ರ ದುಡ್ಡಿಲ್ಲ ಎಂಬ ಜಗದೀಶ್ ಶೆಟ್ಟರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದು ಎಲ್ಲವೂ ಊಹಾಪೋಹ. ಬಿಜೆಪಿಯವರಿಗೆ ಪರಾಜಿತರಾಗ್ತಿವಿ ಅಂತ ಭಯ ಹುಟ್ಟಿದೆ. ಸರ್ಕಾರ ಹೋಗ್ತದೆ ಎಂಬ ಒತ್ತಡದಲ್ಲಿ ಏನೇನೋ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್‌ನಿಂದ ಯಾವ ಎಂಎಲ್ಎ ಕೂಡ ಬಿಜೆಪಿಗೆ ಹೋಗಲ್ಲ. ಹೋದವರು ಪಶ್ಚಾತ್ತಾಪ ಪಟ್ಟು ಅಳುತ್ತಿದ್ದಾರೆ, ರಾತ್ರಿಯೆಲ್ಲ ನಿದ್ದೆ ಮಾಡಿಲ್ಲ ಎಂದರು.
ಪ್ರಕಾಶ್ ಹುಕ್ಕೇರಿ ಸಿಎಂ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪ್ರಕಾಶ್ ಹುಕ್ಕೇರಿ ನಮ್ಮ ಜೊತೆ ಇದ್ದಾರೆ. ಗಣೇಶ ಹುಕ್ಕೇರಿ ಈ ಸಭೆಗೆ ಬಂದಿದ್ದಾರೆ. ಅಭಿವೃದ್ಧಿ ಕೆಲಸ, ಸಂತ್ರಸ್ತರ ಕೆಲಸ ಕಾರ್ಯಗಳಿಗೆ ಸಿಎಂ ಭೇಟಿ ಮಾಡಿದ್ದಾರೆ ಅಷ್ಟೇ. ಕೊಟ್ಟ ಕುದುರೆ ಏರದವನು ವೀರನು ಅಲ್ಲ ಧೀರನು ಅಲ್ಲ ಎಂಬ ಹೆಬ್ಬಾಳ್ಕರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಹೌದು ಸತ್ಯವಾದ ಮಾತನ್ನೇ ಹೇಳಿದ್ದಾರೆ. ಇಬ್ಬರಿಗೂ ಅಧಿಕಾರ ಕೊಟ್ಟಿದ್ವಿ. ಶ್ರೀಮಂತ ಪಾಟೀಲರು ಒಂದು ಬುಟ್ಟಿ ಮಣ್ಣಾದ್ರು ಹಾಕಿದ್ದಾರಾ? ಬಾಂಬೆಯಲ್ಲಿ ಐಷಾರಾಮಿ ಹೋಟೆಲ್‌ಗಳಲ್ಲಿ ವಾಸ್ತವ್ಯ ಮಾಡಿ, ಈಗ ಮಾನ ಮರ್ಯಾದೆ, ನೈತಿಕತೆ ಇಲ್ಲವೇ ಜನರ ಹತ್ರ ಹೋಗಕ್ಕೆ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಮಹಾರಾಷ್ಟ್ರದಲ್ಲಿ ಬಿಜೆಪಿಯವರು ರಾತ್ರೋರಾತ್ರಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ. ರಾತ್ರಿ ಕಳ್ಳಕಾಕರು ಅನೈತಿಕ ಚಟುವಟಿಕೆ ಮಾಡ್ತಾರಂತ ನಾವು ಕೇಳಿದ್ವಿ. ರಾತ್ರೋರಾತ್ರಿ ಪ್ರಮಾಣವಚನ ಸ್ವೀಕಾರ ಮಾಡುವ ಅವಶ್ಯಕತೆ ಏನ್ ಇತ್ತು ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಕಿಡಿಕಾರಿದರು.