ಬೆಳಗಾವಿ/ಬೆಂಗಳೂರು: ಗುರುರಾಘವೇಂದ್ರ ಸಹಕಾರ ಬ್ಯಾಂಕ್ ಅವ್ಯವಹಾರ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆನ್ನುವ ಪ್ರತಿಪಕ್ಷಗಳ ಬೇಡಿಕೆಯನ್ನು ಸರ್ಕಾರ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಸದನದಲ್ಲಿ ಕಾಂಗ್ರೆಸ್ ಸದಸ್ಯರು ಧರಣಿ ನಡೆಸಿದ್ದು, ಸದಸ್ಯರ ಒತ್ತಡಕ್ಕೆ ಮಣಿದ ಸರ್ಕಾರ ತನಿಖಾ ಪ್ರಗತಿ ಕುರಿತು ಜನಪ್ರತಿನಿಧಿಗಳು, ಅಧಿಕಾರಿಗಳು, ಪೊಲೀಸರ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುವ ಕುರಿತ ನಿಲುವನ್ನು ವಿಧಾನ ಪರಿಷತ್ನಲ್ಲಿ ಪ್ರಕಟಿಸಿತು.
ವಿಧಾನ ಪರಿಷತ್ನಲ್ಲಿ ನಿಯಮ 33ರ ಅಡಿ ಗುರುರಾಘವೇಂದ್ರ ಸಹಕಾರ ಬ್ಯಾಂಕ್ನಲ್ಲಿ ನಡೆದಿರುವ ಅವ್ಯವಹಾರದಲ್ಲಿ ಭಾಗಿಯಾದವರ ವಿರುದ್ಧ ಈವರೆಗೂ ಕ್ರಮ ಕೈಗೊಳ್ಳದಿರುವ ಹಾಗು ಹಣ ಹೂಡಿಕೆ ಮಾಡಿ ವಂಚಿತರಾದವರಿಗೆ ಪರಿಹಾರ ಒದಗಿಸುವ ಕುರಿತ ಚರ್ಚೆ ನಡೆಯಿತು. ಕಾಂಗ್ರೆಸ್ ಸದಸ್ಯ ಯು.ಬಿ. ವೆಂಕಟೇಶ್, ಬಿಜೆಪಿ ಸದಸ್ಯ ತುಳಸಿ ಮುನಿರಾಜುಗೌಡ ವಂಚನೆ ಪ್ರಕರಣ ಪ್ರಸ್ತಾಪಿಸಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯಿಸಿದರು.
ಆದರೆ ಸದಸ್ಯರ ಬೇಡಿಕೆಯನ್ನು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿರಸ್ಕರಿಸಿದರು. ಈಗಾಗಲೇ ಸಿಐಡಿ ತನಿಖೆ ಅಂತಿಮ ಹಂತದಲ್ಲಿದೆ. ಹಾಗಾಗಿ ಈ ಹಂತದಲ್ಲಿ ಮತ್ತೊಂದು ತನಿಖಾ ಸಂಸ್ಥೆಗೆ ವಹಿಸಲ್ಲ, ನಮ್ಮ ಅಧಿಕಾರಿಗಳು ಸಮರ್ಥರಿದ್ದಾರೆ ಎಂದರು. ಸರ್ಕಾರದ ಉತ್ತರ ಖಂಡಿಸಿದ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿ, ಸಿಬಿಐ ತನಿಖೆಗೆ ಪಟ್ಟು ಹಿಡಿದರು.
ಈ ವೇಳೆ ಮಾತನಾಡಿದ ಕಾಂಗ್ರೆಸ್ ಸದಸ್ಯ ಪಿ.ಆರ್.ರಮೇಶ್ ನಕಲಿ ದಾಖಲೆ ಪಡೆದು ಸಾಲ ಕೊಡಲಾಗಿದೆ. ಹಾಗಾಗಿ ಸಿಬಿಐಗೆ ಕೊಡುವುದು ಸೂಕ್ತ, ಇದರಲ್ಲಿ ಇಡಿ ಬರಲಿದೆ, ಇಡಿ ತನಿಖೆ ಮಾಡಬೇಕಾದಲ್ಲಿ ಹೊರದೇಶಕ್ಕೆ ಇಬ್ಬರು ಹೋಗಿದ್ದಾರೆ. ಅವರನ್ನು ಕರೆಯಲು ಸಿಬಿಐಗೆ ಮೊದಲು ಕೊಡಬೇಕು, ಸಂಸದರು, ಬಿಜೆಪಿಯವರ ಮೇಲೆ ಒತ್ತಡವಿದೆ. ಹಾಗಾಗಿ ಇದನ್ನು ವಿಳಂಬ ಮಾಡಲಾಗುತ್ತಿದೆ. ಕಾಂಗ್ರೆಸ್ನವರು ಈ ಕೇಸ್ ಹಿಂದೆ ಇದ್ದಿದ್ದರೆ ಇಷ್ಟೊತ್ತಿಗೆ ನಮ್ಮನ್ನೆಲ್ಲಾ ರುಬ್ಬಿ ಬಿಡುತ್ತಿದ್ದರು ಎಂದರು.
ಇದಕ್ಕೆ ಬಿಜೆಪಿ ಸದಸದ್ಯರು ಆಕ್ಷೇಪ ವ್ಯಕ್ತಪಡಿಸಿದರು. ಇದೆಲ್ಲ ನಿರಾಧಾರ ಆರೋಪ ಎಂದು ಸೋಮಶೇಖರ್ ತಿರುಗೇಟು ನೀಡಿದರು. ಇದರಲ್ಲಿ ಕಾಂಗ್ರೆಸ್, ಜೆಡಿಎಸ್ ಬಿಜೆಪಿ ಎನ್ನುವುದಿಲ್ಲ. ಠೇವಣಿದಾರರ ಹಣ ವಾಪಸ್ಗೆ ಸರ್ಕಾರ ಮುಂದಾಗಿದೆಯೇ ಹೊರತು ಸಿಬಿಐಗೆ ಕೊಡಬೇಕು ಎನ್ನುವುದಲ್ಲ ಎಂದು ಹೇಳಿದರು.
ಸರ್ಕಾರದ ಉತ್ತರವನ್ನು ಸಮರ್ಥಿಸಿಕೊಂಡ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ, ಈ ಪ್ರಶ್ನೆ ಮೊದಲು ಎತ್ತಿದ್ದೇ ನಾನು ನಂತರ ಇತರರರು ಪ್ರಸ್ತಾಪ ಮಾಡುತ್ತಿದ್ದಾರೆ. ಹಾಗಾಗಿ ಇದರಲ್ಲಿ ಬಿಜೆಪಿ ಪಾಲಿದೆ ಎನ್ನುವ ಆರೋಪ ಸುಳ್ಳು, ಆದರೆ ಇಂದು ಸಚಿವರು ನೀಡಿದ ಉತ್ತರ ಒಪ್ಪುತ್ತೇವೆ. ತನಿಖೆ ಅಂತಿಮ ಹಂತಕ್ಕೆ ಬಂದಿದೆ ಎಂದಿದ್ದಾರೆ. ಹಾಗಾಗಿ ಈಗ ಮತ್ತೆ ಸಿಬಿಐಗೆ ಕೊಟ್ಟು ವಿಳಂಬ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ಸದಸ್ಯ ಅಬ್ದುಲ್ ನಜೀರ್ ಮಾತನಾಡಿ, ಸಾಲ ನೀಡಿಕೆಗೆ ಮಾರ್ಗಸೂಚಿ ಇದ್ದರೂ ಅದನ್ನು ಉಲ್ಲಂಘಿಸಿ ಸಾಲ ನೀಡಲಾಗಿದೆ ಎಂದರೆ ಇದರ ಉದ್ದೇಶವೇನು? ಇದು ಉದ್ದೇಶಪೂರ್ವಕವಾಗಿ ಮಾಡಲಾಗಿದೆ. ಇದು ವೈಟ್ ಮನಿ, ಒಂದು ಖಾತೆಯಿಂದ ಮತ್ತೊಂದು ಖಾತೆಗೆ ವರ್ಗಾವಣೆಯಾಗಿದೆ. ಸಾಲ ಪಡೆದ ಹಣ ಎಲ್ಲಿ ಹೋಗಿದೆ ಎಂದು ಪತ್ತೆ ಹಚ್ಚಬಹುದಾದ ಪ್ರಕರಣವಾಗಿದೆ.
ಠೇವಣಿ ಹಣಕ್ಕೆ ಬಡ್ಡಿ ಹೆಚ್ಚು ಎಂದು ಇಲ್ಲಿ ಇಟ್ಟಿದ್ದಾರೆ ಆದರೆ ಆ ಹಣಕ್ಕೆ ಇವರಿಂದ ಯಾವ ಭದ್ರತೆ ಸಿಕ್ಕಿದೆ. ಸಾಲ ಪಡೆದವರು ವಿದೇಶಕ್ಕೆ ಹೋಗಿದ್ದಾರೆ, ಅವರನ್ನು ಕರೆತರಲು ಸಿಬಿಐಗೆ ಕೊಡಬೇಕು ಸಿಬಿಐನವರು ವಿದೇಶದಿಂದ ಸಾಲಗಾರರನ್ನು ಕರೆತರುತ್ತಾರೆ. ಇಡಿಗೂ ಅವರು ವಹಿಸಬಹುದು ನಾವು ಸರ್ಕಾರದ ಬಗ್ಗೆ ಆರೋಪ ಮಾಡುತ್ತಿಲ್ಲ. ನಿಮ್ಮ ಕೆಲಸವನ್ನು ನಾವು ಶ್ಲಾಘಿಸುತ್ತೇವೆ. ಆದರೆ ಠೇವಣಿದಾರರ ಹಿತದಿಂದ ಸಿಬಿಐಗೆ ವಹಿಸಿ, ಇದರಲ್ಲಿ ಯಾಕೆ ಯೋಚಿಸುತ್ತೀರಾ? ಎಂದರು.
ಜೆಡಿಎಸ್ ಸದಸ್ಯ ತಿಪ್ಪೇಸ್ವಾಮಿ ಮಾತನಾಡಿ, ಸಭಾಪತಿಗಳ ಕೊಠಡಿಯಲ್ಲಿ ಪ್ರಶ್ನೆ ಕೇಳಿದ ಸದಸ್ಯರು, ಸಭಾನಾಯಕರು, ಪ್ರತಿಪಕ್ಷ ನಾಯಕರು, ಅಧಿಕಾರಿಗಳ ಜೊತೆ ಸಭೆ ನಡೆಸಿ ನಂತರ ಒಂದು ನಿರ್ಧಾರಕ್ಕೆ ಬರುವುದು ಒಳಿತು ಎಂದು ಸಲಹೆ ನೀಡಿದರು. ಭೋಜನ ವಿರಾಮದಲ್ಲಿ ಸಭೆ ಮಾಡಿ ಎಂದರು.
ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಇದೊಂದು ಬಡ ಠೇವಣಿದಾರರು ಕೂಲಿ ನಾಲಿ ಮಾಡಿ ಕಟ್ಟಿದ್ದ ಕೋಟ್ಯಂತರ ಹಣವನ್ನು ಕೆಲವೇ ವ್ಯಕ್ತಿಗಳು ಬ್ಯಾಂಕ್ ನಿಯಮ ಗಾಳಿಗೆ ತೂರಿ ಲಪಟಾಯಿಸಿದ ಪ್ರಕರಣ. ನಮ್ಮದೇನು ಇಲ್ಲ ಎಂದು ಬಿಜೆಪಿಯವರು ಹೇಳುತ್ತಾರೆ, ನಾವು ಖಾತೆದಾರರು ಅಲ್ಲ. ಅವ್ಯವಹಾರದ ಬಗ್ಗೆ ಆರ್ಬಿಐ ಹೇಳಿದೆ ಹಾಗಾಗಿ ಸಮಗ್ರವಾದ ಉತ್ತಮ ತನಿಖೆಯಾಗಬೇಕು, ಇಂತಹ ಇನ್ನು ಹಲವು ಬ್ಯಾಂಕ್ ದುರುಪಯೋಗ ಪ್ರಕರಣ ಇವೆ. ಈಗ ರಾಘವೇಂದ್ರದ್ದು ಮಾತ್ರ ಬೆಳಕಿಗೆ ಬಂದಿದೆ. ನಿಮ್ಮ ಉತ್ತರ ಒಪ್ಪುತ್ತೇವೆ. ನಿಮ್ಮ ಮೇಲೆ ನಾವು ಅನುಮಾನಿಸಲ್ಲ.
ಆದರೆ, ಆರ್ಬಿಐ ಪ್ರಶ್ನೆ ಮಾಡಲು ಸಿಐಡಿಗೆ ಆಗಲ್ಲ ಹಾಗಾಗಿ ಸಿಬಿಐಗೆ ಕೊಡಿ, ನಾಡಿನ ಜನರಿಗೆ ನ್ಯಾಯ ದೊರಕಿಸಿಕೊಡಲು ಇದರಿಂದ ಸಹಾಯ ಆಗಲಿದೆ. ಸಿಬಿಐ ಅನ್ನು ನಾವು ಪರಮೋಚ್ಚ ಎಂದು ಒಪ್ಪಿಕೊಂಡಿದ್ದೇವೆ. ನಿಮ್ಮ ಸಮಯದಲ್ಲಿ ಇದೊಂದು ಐತಿಹಾಸಿಕ ನ್ಯಾಯ ಬಡಜನರಿಗೆ ಸಿಗಲಿ. ಯಾರು ಯಾರು ಕಳ್ಳತನ ಮಾಡುತ್ತಿದ್ದಾರೋ ಅವರೆಲ್ಲರಿಗೂ ಇದರಿಂದ ಎಚ್ಚರಿಕೆಯ ಗಂಟೆ ನೀಡಿದಂತಾಗಲಿದೆ ಎಂದು ಹೇಳಿದರು.
ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಮಧ್ಯಪ್ರವೇಶಿಸಿ, ಕಾಂಗ್ರೆಸ್ ಪಕ್ಷ ಇದ್ದರೆ ಸಿಬಿಐ, ಇಡಿ, ಇಟಿ ಎಲ್ಲ ಬರಲಿದೆ ಆದರೆ ಇಲ್ಲಿ ಮಾತ್ರ ಅದಾಗುತ್ತಿಲ್ಲ ಅಂದರೆ ಯಾರೋ ಪ್ರಭಾವಿ ವ್ಯಕ್ತಿ ಇದರಲ್ಲಿ ಇರಬೇಕು ಅದಕ್ಕೆ ಮೀನಾಮೇಶ ಎಣಿಸುತ್ತಿದ್ದಾರೆ ಎನಿಸಲಿದೆ ಎಂದು ಗಂಭೀರ ಆರೋಪ ಮಾಡಿದರು.
ಕಡೆಯದಾಗಿ ಮಾತನಾಡಿದ ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್, ಬಡ್ಡಿ ಆಸೆಗೆ ಈ ಬ್ಯಾಂಕ್ನಲ್ಲಿ ಇಟ್ಟಿದ್ದರು. ಪ್ರತಿ ವರ್ಷ ಆರ್ಬಿಐ ಉತ್ತಮ, ಅತ್ಯುತ್ತಮ ಎಂದು ಪ್ರಮಾಣ ಪತ್ರ ನೀಡಿ ಈ ಬ್ಯಾಂಕ್ಗೆ ಸನ್ಮಾನ ಮಾಡಿದೆ. ಆರ್ಬಿಐ ನವರೇ ತಪ್ಪು ಮಾಡಿದ್ದಾರೆ. ಆರ್ಬಿಐ ನೇಮಿಸಿದ ಆಡಳಿತಾಧಿಕಾರ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದಾಗ ಸಿಬಿಐಗೆ ಯಾಕೆ ವಹಿಸಲ್ಲ. ಇನ್ನು ಮುಂದೆ ಮತ್ತೆ ನಿಮಗೆ ನಾವು ಈ ಪ್ರಶ್ನೆ ಕೇಳಲ್ಲ ನಿಮಗೆ ಬೇಕಾದಂತೆ ಮಾಡಿಕೊಳ್ಳಿ, ಇನ್ಮುಂದೆ ನಾವು ಏನೂ ಕೇಳಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಸದಸ್ಯರ ಪ್ರಸ್ತಾಪ, ಬೇಡಿಕೆಗಳ ಬಳಿಕೆ ಉತ್ತರ ನೀಡಿದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, 5 ಲಕ್ಷದಂತೆ 22,244 ಜನಕ್ಕೆ 712.35 ಕೋಟಿ ಹಣ ವಾಪಸ್ ಮಾಡಿದ್ದೇವೆ. 1-2 ಲಕ್ಷದಂತೆ 233 ಕೋಟಿ ಹಣವನ್ನು ಮರಳಿಸಿದ್ದೇವೆ. 192 ಕೋಟಿ ಹಣ ಈವರೆಗೂ ರಿಕವರಿ ಆಗಿದೆ. ಈಗ ಪ್ರಕರಣ ಅಂತಿಮ ಘಟ್ಟಕ್ಕೆ ಬಂದಿದೆ. ಆಸ್ತಿ ಮುಟ್ಟುಗೋಲು ಹಾಕಿ ಹರಾಜು ಮಾಡಲು ಮುಂದಾಗಿದ್ದೇವೆ. 1294 ಕೋಟಿ ಹಣವೇನಿದೆ ಅದನ್ನು ಆಸ್ತಿ ಹರಾಜು ಹಾಕಿ ವಾಪಸ್ ಕೊಟ್ಟರೆ ನ್ಯಾಯ ಸಿಗಲಿದೆ.
ಇದರಲ್ಲಿ ಯಾರ ರಕ್ಷಣೆ ಇಲ್ಲ. ಸಿಬಿಐಗೆ ಕೊಟ್ಟರೆ ಮತ್ತೆ ಎರಡು ಮೂರು ವರ್ಷವಾಗಲಿದೆ ಆಗ ನಾವು ಉತ್ತರ ಕೊಡಲು ಸಾಧ್ಯವಾಗಲ್ಲ. ಠೇವಣಿದಾರರ ನರಕಯಾತನೆ ಮುಂದುವರೆಯಲಿದೆ. ಆದಷ್ಟು ಬೇಗ ಆಸ್ತಿಯನ್ನು ಹರಾಜು ಹಾಕುವ ನಿರ್ಧಾರ ಮಾಡಿದ್ದೇವೆ. ಸಧ್ಯದಲ್ಲೇ ಬೇಕಾದರೆ ಒಂದು ಸಭೆ ಮಾಡೋಣ, ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳನ್ನು ಕರೆಸುತ್ತೇನೆ ನೀವೂ ಬನ್ನಿ, ಬಹುತೇಕ ಈಗ ಅಂತಿಮ ಘಟ್ಟಕ್ಕೆ ಬಂದಿದೆ.
ರಾಜ್ಯದಲ್ಲಿ 264 ಅರ್ಬನ್ ಕೋ ಆರಪರೇಟಿವ ಬ್ಯಾಂಕ್ ಇವೆ. ಅವುಗಳಲ್ಲಿ ಇದು ನಂಬರ್ ಒನ್ ಫ್ರಾಡ್ ಕೇಸ್, ಬೇಕು ಎಂದೇ ವಂಚನೆ ಮಾಡಲಾಗಿದೆ. ಸಿಬಿಐ ಹೊರತುಪಡಿಸಿ ಸಿಐಡಿಗೆ ಒತ್ತಡ ಹಾಕಿ, ಆಸ್ತಿ ಹರಾಜು ಹಾಕಿಸಿ ಇತ್ಯರ್ಥ ಮಾಡೋಣ ಎಂದರು. ಸಿಐಡಿ ಅಧಿಕಾರಿ, ಆರ್ಬಿಐ ಅಧಿಕಾರಿ ಕರೆಸಿ ಸಭೆ ಮಾಡುತ್ತೇನೆ, ಪ್ರತಿಪಕ್ಷದವರು, ಪ್ರಶ್ನೆ ಕೇಳಿದವರ ಸಭೆ ಕರೆಯಲಿದ್ದೇನೆ, ಅಲ್ಲಿ ನಿಮಗೆ ನಂಬಿಕೆ ಬರದೆ ಇದ್ದಲ್ಲಿ ಸಿಎಂ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ.
ನಿಮ್ಮನ್ನೇ ಕರೆದು ಸಭೆ ಮಾಡುತ್ತೇನೆ ಎಂದು ಈ ಸದನದಲ್ಲಿ ಭರವಸೆ ಕೊಡಲಿದ್ದೇನೆ. ಮೂರು ದಿನದಲ್ಲಿ ತನಿಖೆ ನಡೆಸುತ್ತಿರುವ ಅಧಿಕಾರಿ, ಜನಪ್ರತಿನಿಧಿಗಳು, ಪೊಲೀಸ್ ಜೊತೆ ಸಭೆ ನಡೆಸಿ ತೀರ್ಮಾನ ಮಾಡೋಣ ಎಂದರು. ಸಚಿವರು ಉತ್ತರ ಮುಗಿಸುತ್ತಿದ್ದಂತೆ ಸಭಾಪತಿ ಬಸವರಾಜ ಹೊರಟ್ಟಿ ಪ್ರತಿಪಕ್ಷಗಳ ಪ್ರತಿಕ್ರಿಯೆಗೆ ಅವಕಾಶ ನೀಡದೆ ಸಭೆ ಮುಂದೂಡಿಕೆ ಮಾಡಿದರು.
ಇದನ್ನೂ ಓದಿ: ಕಾಡು ಪ್ರಾಣಿ ದಾಳಿಯಿಂದ ಮೃತಪಟ್ಟ ಕುಟುಂಬಗಳಿಗೆ ₹15 ಲಕ್ಷ ಪರಿಹಾರ: ಸಚಿವ ಅಶೋಕ್