ಅಥಣಿ: ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಸರ್ಕಾರದ ಆಡಳಿತ ಯಂತ್ರ ಮೂರು ತಿಂಗಳಿಂದ ಸ್ಥಗಿತಗೊಂಡಿದೆ. ಪ್ರಸ್ತುತ ಈಗ ವಿಧಾನಸೌಧ ಖಾಲಿಯಾಗಿದೆ. ಸರ್ಕಾರ ಸತ್ತು ಹೋಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.
ಇಂದು ಅಥಣಿ ಪಟ್ಟಣದ ಶಿವಣಗಿ ಸಾಂಸ್ಕೃತಿಕ ಭವನದಲ್ಲಿ ಅಭ್ಯರ್ಥಿ ಗಜಾನನ ಮಂಗಸೂಳಿ ಪರ ಪ್ರಚಾರ ಭಾಷಣದಲ್ಲಿ ಮಾತನಾಡಿದ ಅವರು, ಸಂವಿಧಾನ ದಿನಾಚರಣೆ ಅಂಗವಾಗಿ ದಿನೇಶ್ ಗುಂಡೂರಾವ್ ಅವರು ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಯಾರದೋ ಋಣದಲ್ಲಿ ಇರುವುದಾಗಿ ಹೇಳ್ತಾರೆ. ಇದು ಸರಿಯಲ್ಲ. ಸಿಎಂ ತನ್ನ ಪ್ರಜೆಗಳ ಋಣದಲ್ಲಿ ಇರಬೇಕು ಎಂದು ಹೇಳಿದರು. ಅನರ್ಹರು ಪಕ್ಷ ಬಿಟ್ಟು ತಾಯಿಗೆ ದ್ರೋಹ ಮಾಡಿದ್ದಾರೆ. ಇದಕ್ಕಿಂತ ದೊಡ್ಡ ನೀಚ ಕೆಲಸ ಯಾವುದೂ ಇಲ್ಲ. ಧರ್ಮ, ದೇವರು, ರಾಷ್ಟ್ರೀಯತೆ ಬಗ್ಗೆ ಮಾತನಾಡುವುದರಲ್ಲಿ ಬಿಜೆಪಿ ಎತ್ತಿದ ಕೈ. ಬಿಜೆಪಿಯಲ್ಲಿ ಇಲ್ಲದವರನ್ನು ದೇಶದ್ರೋಹಿ ಎಂದು ಕರೆಯುತ್ತಾರೆ ಎಂದು ಆರೋಪಿಸಿದರು.
ಮಹಾರಾಷ್ಟ್ರ ಸರ್ಕಾರ ರಚನೆ ಸಂಬಂಧ ಸುಪ್ರಿಂಕೋರ್ಟ್ ಕೊಟ್ಟ ಆದೇಶ ಪ್ರಧಾನಿ ಮೋದಿ ಮತ್ತು ಮಹಾರಾಷ್ಟ್ರ ರಾಜ್ಯಪಾಲರಿಗೆ ಆಗಿರುವ ಕಪಾಳ ಮೋಕ್ಷ. ಬಿಜೆಪಿಗೆ ನೈತಿಕತೆ ಇಲ್ಲ ಎಂದು ಜನರಿಗೆ ಅರ್ಥವಾಗಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಬೆಂಬಲ ಕೊಟ್ಟ ಶಾಸಕರಿಗೆ ₹100 ಕೋಟಿ ಕೊಡುತ್ತಿದ್ದಾರಂತೆ. ಅದನ್ನು ನೋಡಿ ನಮ್ಮ ರಾಜ್ಯದ ಅನರ್ಹ ಶಾಸಕರು ನಮಗೂ ಅಷ್ಟೇ ಕೊಡಿ ಅಂತಾ ದುಂಬಾಲು ಬಿದ್ದವರಂತೆ ಎಂದು ಲೇವಡಿ ಮಾಡಿದರು.
ನಂತರ ಮಾತನಾಡಿದ ಮಾಜಿ ಸಚಿವ ಸತೀಶ್ ಜಾರಕಿಹೊಳಿ, ಅಥಣಿ ಅಭಿವೃದ್ಧಿಗಾಗಿ ಮಹೇಶ್ ಕುಮಟಳ್ಳಿ ರಾಜೀನಾಮೆ ನೀಡಿದ್ದಾರೆ ಎಂಬುದು ಸುಳ್ಳು. ತಮ್ಮ ಸ್ವಾರ್ಥಕ್ಕೆ ರಾಜೀನಾಮೆ ಕೊಟ್ಟಿದ್ದಾರೆಯೇ ವಿನಃ ಅಭಿವೃದ್ಧಿಗಾಗಿ ಅಲ್ಲ. ಚುನಾವಣೆ ಅವಶ್ಯತೆಯೇ ಇರಲಿಲ್ಲ. ಹಾಗೆ ಮಾಡಿದ ಅನರ್ಹರಿಗೆ ತಕ್ಕ ಪಾಠ ಕಲಿಸಬೇಕು ಎಂದು ಮನವಿ ಮಾಡಿದರು.