ಬೆಳಗಾವಿ: ತಾಲೂಕಿನ ಅಲಾರವಾಡ ಗ್ರಾಮದ ಹೊರ ವಲಯದಲ್ಲಿ ಚಳಿಗಾಲದ ಅಧಿವೇಶನದ ಕರ್ತವ್ಯಕ್ಕಾಗಿ ನಿಯೋಜನೆಗೊಂಡಿರುವ ಪೊಲೀಸರ ವಸತಿಗೆ ನಿರ್ಮಿಸಿರುವ ಜರ್ಮನ್ ಟೆಂಟ್ಗೆ ಡಿಜಿ - ಐಜಿಪಿ ಅಲೋಕ್ ಮೋಹನ್ ಅವರು ಭೇಟಿ ನೀಡಿ, ವ್ಯವಸ್ಥೆ ಪರಿಶೀಲನೆ ನಡೆಸಿದರು.
10 ದಿನಗಳ ಚಳಿಗಾಲದ ಅಧಿವೇಶನಕ್ಕೆ ಅಧಿವೇಶನ ಕರ್ತವ್ಯಕ್ಕಾಗಿ ನಿಯೋಜನೆಗೊಂಡಿರುವ ಪೊಲೀಸರ ವಸತಿಗೆ ಜರ್ಮನ್ ಟೆಂಟ್ ಮೂಲಕ ಟೌನ್ ಶಿಪ್ ನಿರ್ಮಿಸಲಾಗಿದೆ. ಟೆಂಟ್ಗಳಿಗೆ ಭೇಟಿ ನೀಡಿದ ಅಲೋಕ್ ಮೋಹನ್ ಅವರು ಪೊಲೀಸ್ ಸಿಬ್ಬಂದಿಗಳನ್ನು ಮಾತನಾಡಿಸಿ ಇಲ್ಲಿ ಮಾಡಿರುವ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದರು. ಯಾವುದೇ ರೀತಿ ತೊಂದರೆ ಆಗದಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಗಾದಿ, ಹೊದಿಕೆ, ದಿಂಬು, ಊಟ, ಸ್ನಾನಕ್ಕೆ ಬಿಸಿನೀರು ಸೇರಿ ಎಲ್ಲಾ ವ್ಯವಸ್ಥೆಯನ್ನು ಮಾಡುವಂತೆ ತಿಳಿಸಿದರು. ಚಳಿ ಹೆಚ್ಚಿರುವ ಹಿನ್ನೆಲೆ ಸಿಬ್ಬಂದಿಗಳ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಿಜಿ- ಐಜಿಪಿ ಅಲೋಕ ಮೋಹನ್ ಅವರು, ನಾಳೆಯಿಂದ ಅಧಿವೇಶನ ಆರಂಭವಾಗಲಿರುವುದರಿಂದ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. 6 ಸಾವಿರ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಇನ್ನು ವಿವಿಧ ಕಡೆ ನಿರ್ಮಿಸಿರುವ ಕ್ಯಾಂಪ್ಗಳಲ್ಲಿ ಒಳ್ಳೆಯ ರೀತಿ ವ್ಯವಸ್ಥೆ ಮಾಡಿದ್ದೇವೆ ಎಂದರು. ಈ ವೇಳೆ ಐಜಿಪಿ ವಿಕಾಸಕುಮಾರ, ನಗರ ಪೊಲೀಸ್ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಸೇರಿ ಹಿರಿಯ ಅಧಿಕಾರಿಗಳು ಇದ್ದರು.
ಇದನ್ನೂ ಓದಿ: ಅಧಿವೇಶನದಲ್ಲಿ ಜನರ ಹಿತದ ಬಗ್ಗೆ ಚಿಂತಿಸಿ, ಸದನ ಮುಂದೂಡಿಕೆಗೆ ಕಡಿವಾಣ ಹಾಕಿ: ಹೋರಾಟಗಾರರ ಆಗ್ರಹ
ಅಧಿವೇಶನದ ಸಿದ್ಧತೆಗಳನ್ನು ಪರಿಶೀಲಿಸಿದ ಸ್ಪೀಕರ್ ಯು ಟಿ ಖಾದರ್, ಸಭಾಪತಿ ಹೊರಟ್ಟಿ: ಮತ್ತೊಂದೆಡೆ, ವಿಧಾನಮಂಡಲದ ಚಳಿಗಾಲ ಅಧಿವೇಶನ ಸುಸೂತ್ರವಾಗಿ ನಡೆಯುವ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ಸಿದ್ಧತೆಗಳನ್ನು ವಿಧಾನಸಭಾಧ್ಯಕ್ಷ ಯು ಟಿ ಖಾದರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪರಿಶೀಲನೆ ನಡೆಸಿದರು. ಸುವರ್ಣಸೌಧದಲ್ಲಿ ಕೈಗೊಂಡಿರುವ ಸಿದ್ಧತೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಅಗತ್ಯ ಸಲಹೆ ಸೂಚನೆಗಳನ್ನು ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ನೀಡಿದರು. ಸುವರ್ಣಸೌಧದ ಪ್ರವೇಶದ್ವಾರಗಳಲ್ಲಿನ ಸಿದ್ಧತೆ, ವಿಧಾನಸಭಾ ಸದನ, ವಿಧಾನ ಪರಿಷತ್ ಸದನಗಳನ್ನು ವೀಕ್ಷಿಸಿದ ಅವರು ಮೈಕ್ ವ್ಯವಸ್ಥೆ ಸೇರಿ ಇನ್ನಿತರ ಅಂಶಗಳನ್ನು ಪರಿಶೀಲಿಸಿದರು. ಆಡಳಿತ ಪಕ್ಷದ ಮೊಗಸಾಲೆ, ವಿರೋಧ ಪಕ್ಷದ ಮೊಗಸಾಲೆ, ಸಭಾಧ್ಯಕ್ಷರ, ಸಭಾಪತಿಗಳ ಕೊಠಡಿ, ಮುಖ್ಯಮಂತ್ರಿಗಳ ಕೊಠಡಿ, ವಿರೋಧಪಕ್ಷದ ನಾಯಕರ ಕೊಠಡಿಯನ್ನು ಪರಿಶೀಲಿಸಿದರು.