ಬೆಳಗಾವಿ: ಕೊರೊನಾ ವೈರಸ್ ಹಿನ್ನೆಲೆ ಆಂಧ್ರದ ಶ್ರೀಶೈಲದಲ್ಲಿ ನಡೆಯುವ ಯುಗಾದಿ ಜಾತ್ರೆಗೆ ಬರುವ ಭಕ್ತರು ತಮ್ಮ ಯಾತ್ರೆಯನ್ನು ಸ್ಥಗಿತಗೊಳಿಸುವಂತೆ ಶ್ರೀಶೈಲ ಪೀಠದ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಾತ್ರೆಯಲ್ಲಿ ಸಾವಿರಾರು ಜನ ಪಾಲ್ಗೊಳ್ಳುತ್ತಾರೆ, ಕೊರೊನಾ ಸೋಂಕು ತಗುಲಿದ ವ್ಯಕ್ತಿ ಜಾತ್ರೆಗೆ ಬಂದರೆ ಅಲ್ಲಿದ್ದ ಎಲ್ಲರಿಗೂ ಸೋಂಕು ತಗುಲುವ ಸಾಧ್ಯತೆ ಇರುತ್ತದೆ. ಚಿಕಿತ್ಸೆಗೆ ನಿರ್ದಿಷ್ಟ ಔಷಧಿ ಇಲ್ಲದಿರುವುದರಿಂದ ಕೊರೊನಾ ಹರಡದಂತೆ ನೋಡಿಕೊಳ್ಳುವುದು ಎಲ್ಲರ ಕರ್ತವ್ಯವಾಗಿದೆ ಎಂದರು.
ದೇವಸ್ಥಾನಗಳು ಮನುಕುಲದ ಕಲ್ಯಾಣ ಕೇಂದ್ರಗಳಾಗಿವೆ, ಇವು ಮನುಷ್ಯರ ಮಾರಣ ಹೋಮಕ್ಕೆ ಕಾರಣವಾಗಬಾರದು, ಆದ್ದರಿಂದ ಭಾವಾವೇಶಕ್ಕೆ ಒಳಗಾಗಿ ವಾಸ್ತವ ಪರಿಸ್ಥಿತಿ ಅಲಕ್ಷಿಸಬಾರದು ಭಕ್ತಿಯ ಹೆಸರಿನಲ್ಲಿ ಹುಚ್ಚು ಧೈರ್ಯ ಪ್ರದರ್ಶಿಸಲು ಪ್ರಯತ್ನಿಸದೆ ಎಲ್ಲ ಭಕ್ತರೂ ತಮ್ಮ ಶ್ರೀಶೈಲ ಯಾತ್ರೆಯನ್ನು ಮೊಟಕುಗೊಳಿಸಿ ವಾಪಸಾಗಬೇಕುಎಂದು ತಿಳಿಸಿದರು.
ಜಾತ್ರೆಗೆ ಬರುವ ಭಕ್ತರೆಲ್ಲರಿಗಾಗಿ ಪೀಠದಿಂದ ಮಾರ್ಚ್ 19 ರಿಂದ 23 ರವರೆಗೆ ಮಲ್ಲಯ್ಯನ ಭಕ್ತರ ಬೃಹತ್ ಸಮಾವೇಶ ಮತ್ತು ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮಾರ್ಚ್ 21ರ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಆಹ್ವಾನಿಸಲಾಗಿತ್ತು, ಆದರೆ, ಕೊರೊನಾ ಭೀತಿ ಇರುವುದಂದ ಎಲ್ಲವನ್ನೂ ರದ್ದುಗೊಳಿಸಲಾಗಿದೆ ಎಂದು ತಿಳಿಸಿದರು.