ಬೆಳಗಾವಿ: ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ 36,117 ಹೊಸ ಶಾಲಾ ಕಟ್ಟಡಗಳನ್ನು ನಿರ್ಮಿಸಲಾಗಿದೆ. 18,618 ಕಟ್ಟಡಗಳನ್ನು ದುರಸ್ಥಿ ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ಇಂದು ಶಾಸಕ ಪ್ರಿಯಾಂಕ್ ಖರ್ಗೆಯವರ ಪ್ರಶ್ನೆಗೆ ಸಚಿವರು ವಿವರವಾದ ಉತ್ತರ ನೀಡಿದರು.
ಹಿಂದಿನ ಸರ್ಕಾರ ಕಾಲಕಾಲಕ್ಕೆ ತಕ್ಕಂತೆ ಶಾಲಾ ಕಟ್ಟಡಗಳ ನಿರ್ಮಾಣ ಹಾಗೂ ದುರಸ್ಥಿ ಕಾರ್ಯ ಮಾಡಲಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ಇಷ್ಟೊಂದು ಪ್ರಮಾಣದ ಕಟ್ಟಡಗಳ ನಿರ್ಮಾಣ ಹಾಗೂ ದುರಸ್ಥಿಗೆ ದೊಡ್ಡ ಮೊತ್ತದ ಅನುದಾನ ಬಳಸಬೇಕಾಗಿದೆ ಎಂದರು. 2013 ರಿಂದ 18ರವರೆಗೆ ಶಾಲಾ ಕಟ್ಟಡಗಳ ದುರಸ್ಥಿ ಆಗಿಲ್ಲ. ನಮ್ಮ ಸರ್ಕಾರ ಅವಧಿಯಲ್ಲಿ ದುರಸ್ಥಿ ಕಾರ್ಯ ಹೆಚ್ಚಾಗಿದೆ. ಪ್ರತಿವರ್ಷ 3 ಸಾವಿರ ಕೊಠಡಿಗಳ ದುರಸ್ಥಿ ಆಗುತ್ತಿದೆ. ಪಠ್ಯಪುಸ್ತಕಗಳ ಸುಳ್ಳು ಇತಿಹಾಸ ತೆಗೆದು ಸತ್ಯವನ್ನಷ್ಟೇ ಹೇಳಲಾಗುತ್ತಿದೆ ಎಂದರು.
2022-23ನೇ ಸಾಲಿನ ಯುಸೈಡ್/ಸ್ಯಾಟ್ಸ್ ಅಂಕಿಅಂಶಗಳ ಪ್ರಕಾರ, 75,675 ಸರ್ಕಾರಿ ಶಾಲಾ ಕೊಠಡಿಗಳಿಗೆ ದುರಸ್ಥಿ ಅವಶ್ಯಕತೆ ಇದೆ. ಪ್ರತಿ ಕೊಠಡಿಗಳಿಗೆ 2 ಲಕ್ಷ ರೂ.ಗಳಂತೆ ಒಟ್ಟು 73,448 ಲಕ್ಷ ರೂ.ಗಳ ಅವಶ್ಯಕತೆ ಇದೆ. 38,951 ಕೊಠಡಿಗಳಿಗೆ ದೊಡ್ಡ ಪ್ರಮಾಣದ ದುರಸ್ಥಿಯ ಅವಶ್ಯಕತೆ ಇದ್ದು, ಪ್ರತಿ ಕೊಠಡಿಗೆ ಐದು ಲಕ್ಷ ರೂ.ಗಳಂತೆ ಒಟ್ಟು 1,94,755 ಲಕ್ಷ ಹಣದ ಅವಶ್ಯಕತೆ ಇದೆ. ಒಟ್ಟು 75,675 ಕೊಠಡಿಗಳ ದುರಸ್ತಿಗೆ 2,682 ಕೋಟಿಗಳು ಬೇಕಿದೆ ಎಂದು ಹೇಳಿದರು.
ಕುಶಾಲನಗರ ಸಿಎಚ್‍ಸಿ 100 ಹಾಸಿಗೆಗಳ ಸಾರ್ವಜನಿಕ ಆಸ್ಪತ್ರೆಯಾಗಿ ಮೇಲ್ದರ್ಜೆಗೆ: ಕೊಡಗು ಜಿಲ್ಲೆ ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರವನ್ನು 100 ಹಾಸಿಗೆಗಳ ಸಾರ್ವಜನಿಕ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಅವರು, ಶಾಸಕ ಅಪ್ಪಚ್ಚುರಂಜನ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಈಗಾಗಲೇ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅಧೀನ ಆಸ್ಪತ್ರೆಯು 300 ಹಾಸಿಗೆ ಸಾಮರ್ಥ್ಯ ಹೊಂದಿದ್ದು, ಹೆಚ್ಚುವರಿಯಾಗಿ 450 ಹಾಸಿಗೆ ಸಾಮರ್ಥ್ಯದ ಮಲ್ಟಿ ಸ್ಪೆಷಾಲಿಟಿ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದ್ದು, ಲಭ್ಯವಿರುವ ಎಲ್ಲಾ ಚಿಕಿತ್ಸೆಗಳನ್ನು ಆಸ್ಪತ್ರೆಯಲ್ಲಿ ನೀಡುತ್ತಿದೆ.
ಸೂಪರ್ ಸ್ಪೆಷಾಲಿಟಿ ಚಿಕಿತ್ಸೆ ಅಗತ್ಯ ಸಂದರ್ಭಗಳಲ್ಲಿ ಮಾತ್ರ ರೋಗಿಗಳ ಇಚ್ಚೆಯನುಸಾರ ಶಿಪಾರಸು ಮಾಡಲಾಗುತ್ತಿದೆ. ಆದುದರಿಂದ ಮಡಿಕೇರಿ ಮತ್ತು ವಿರಾಜಪೇಟೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಪ್ರಾರಂಭಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಇದನ್ನೂ ಓದಿ: 8001.12 ಕೋಟಿ ರೂ. ಮೊತ್ತದ ಎರಡನೇ ಕಂತಿನ ಪೂರಕ ಅಂದಾಜು ವಿಧಾನಸಭೆಯಲ್ಲಿ ಮಂಡನೆ