ಬೆಳಗಾವಿ: ಕೋವಿಡ್ ಹಾವಳಿ ಮಧ್ಯೆಯೇ ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿ ಅದ್ಧೂರಿಯಾಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುವ ಮೂಲಕ ಸಾರ್ವಜನಿಕರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಬಿಜೆಪಿ ಶಾಸಕ ಕೋವಿಡ್ ರೂಲ್ಸ್ ಬ್ರೇಕ್ ಮಾಡಿದಂತಾಗಿದೆ.
ಸವದತ್ತಿ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ ಆನಂದ ಮಾಮನಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಸವದತ್ತಿ ಪಟ್ಟಣದಲ್ಲಿರುವ ಸ್ವಗೃಹದಲ್ಲಿ ಆನಂದ ಮಾಮನಿ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ನಿತ್ಯ ನೂರಾರು ಕೊರೊನಾ ಕೇಸ್ ಪತ್ತೆ ಆಗುತ್ತಿದ್ದರೂ ಜವಾಬ್ದಾರಿ ಸ್ಥಾನದಲ್ಲಿರುವ ಆನಂದ ಮಾಮನಿ ಕ್ಯಾರೆ ಎನ್ನುತ್ತಿಲ್ಲ ಎಂದು ಆರೋಪಿಸಲಾಗಿದೆ.
ಓದಿ: ಮಹಾರಾಷ್ಟ್ರ ಗಡಿಯಲ್ಲಿ ಬಿಗಿ ಭದ್ರತೆ: ಗಲಾಟೆ ಮಾಡಿ ಕರ್ನಾಟಕ ಪ್ರವೇಶ ಮಾಡುತ್ತಿರುವ ಪ್ರಯಾಣಿಕರು
ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿಗೆ ಶುಭಕೋರಲು ಕ್ಷೇತ್ರದ ಜನ ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಜನರು ಶುಭಕೋರಲು ಮುಗಿಬೀಳುತ್ತಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಜನತೆ ಶುಭಕೋರಲು ಬರುತ್ತಿದ್ದರೂ ಶಾಸಕ ಆನಂದ ಮಾಮನಿ ಕೂಡ ಮಾಸ್ಕ್ ಧರಿಸಿಲ್ಲ.
ಜನರಿಗೆ ತಿಳಿವಳಿಕೆ ನೀಡಬೇಕಿದ್ದ ಡೆಪ್ಯುಟಿ ಸ್ಪೀಕರ್ ಅವರೇ ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಜನರಿಗೊಂದು ನ್ಯಾಯ, ಜನಪ್ರತಿನಿಧಿಗಳಿಗೊಂದು ನ್ಯಾಯವೇ? ಎಂದು ಜನರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.