ಬೆಳಗಾವಿ: ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಸಿಬ್ಬಂದಿಗಳ ಅಕ್ರಮ ನೇಮಕಾತಿಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸ್ನಾತಕೋತ್ತರ ಹಾಗೂ ಸಂಶೋಧಕರ ಒಕ್ಕೂಟ ವತಿಯಿಂದ ಸುವರ್ಣ ಗಾರ್ಡನ್ ಟೆಂಟ್ ಬಳಿ ಪ್ರತಿಭಟನೆ ನಡೆಸಲಾಯಿತು.
2023 ರ ಮೇ 29 ರಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಅಕ್ರಮವಾಗಿ ನೇಮಕವಾಗಿರುವ ಬೋಧಕ ಬೋಧಕೇತರ ಹುದ್ದೆಗಳನ್ನು ರದ್ದುಗೊಳಿಸಿ ಮರು ಅಧಿಸೂಚನೆ ಹೊರಡಿಸುವಂತೆ ಅನೇಕ ಸಲ ಮನವಿ ಸಲ್ಲಿಸಿದರೂ ನ್ಯಾಯ ಸಿಕ್ಕಿಲ್ಲ. ಅಕ್ರಮವಾಗಿರುವ ನೇಮಕಾತಿಯನ್ನು ಅಧಿಕಾರಿಗಳು ಸಕ್ರಮ ಮಾಡಲು ಹೊರಟಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಈ ವೇಳೆ ಮಾತನಾಡಿದ ಹೋರಾಟಗಾರ ಸಿದ್ದಪ್ಪ, ಸ್ನಾತಕೋತ್ತರ ಪದವಿ ಪಡೆದರೂ ಇವರ ಅವ್ಯವಹಾರ, ಅಕ್ರಮಗಳಿಂದ ನಮಗೆ ನೌಕರಿ ಸಿಗುತ್ತಿಲ್ಲ. ಕೂಡಲೇ ಅಕ್ರಮ ನೇಮಕಾತಿಯನ್ನು ರದ್ದುಗೊಳಿಸಿ ಮರು ಅಧಿಸೂಚನೆ ಹೊರಡಿಸಬೇಕು. ಅಲ್ಲದೇ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಯುಜಿಸಿ ನಿಯಮ ಗಾಳಿಗೆ ತೂರಿದ್ದಾರೆ. ಪಿಎಸ್ಐ ನೇಮಕಾತಿಗೆ ಹೊಸದಾಗಿ ಆದೇಶ ಹೊರಡಿಸಿದಂತೆ ಇಲ್ಲಿಯೂ ಮರು ನೇಮಕಾತಿಗೆ ಆಗ್ರಹಿಸಿದರು.
ಒಕ್ಕೂಟದ ಅಧ್ಯಕ್ಷ ಶಿವಸೋಮಪ್ಪ ನಿಟ್ಟೂರು ಮಾತನಾಡಿ, 2023 ರ ಮೇ 29 ರಂದು ಸಿಂಡಿಕೇಟ್ ಸಭೆ ಮಾಡಿ ಯುಜಿಸಿ ನಿಯಮ ಗಾಳಿಗೆ ತೂರಿ ನೇಮಕ ಮಾಡಿದ್ದಾರೆ. ಅಕ್ರಮವಾಗಿ ನೇಮಕಗೊಂಡಿರುವ ಅಧಿಕಾರಿಗಳನ್ನು ಬಂಧಿಸಬೇಕು. ಇನ್ನು ಸೂಕ್ತ ತನಿಖೆ ಮಾಡಬೇಕು, ತನಿಖೆಗಾಗಿ ನಿವೃತ್ತ ನ್ಯಾಯಮೂರ್ತಿ ನೇಮಕ ಮಾಡಬೇಕು. ಭ್ರಷ್ಟ ಅಧಿಕಾರಿಗಳನ್ನು ಬಂಧಿಸುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಡಾ. ಬಿ.ಎಂ. ದುಗ್ಗಾಣಿ, ಡಾ. ಎಂ.ವೈ. ಬಾಲ್ಯಾಳ, ಡಾ.ನಾಗರಾಜ ಎಸ್., ಕಿರಣ ಚವ್ಹಾಣ, ರಾಮಣ್ಣ, ನಾಗರಾಜ ಇಟಗಿ ಸೇರಿ ಮತ್ತಿತರರು ಇದ್ದರು.
ಇದನ್ನೂ ಓದಿ: ಖಾಸಗಿ ಕಂಪನಿಗಳಿಂದ ಹೆನ್ನಾಗರ ಕೆರೆ ಒತ್ತುವರಿ : ತಂತಿ ಬೇಲಿ ಹಾಕಿ ಮಾರ್ಗ ಬಂದ್ ಮಾಡಿದ ಜಿಲ್ಲಾಡಳಿತ
ಇದೇ ರೀತಿ ಸುವರ್ಣ ಗಾರ್ಡನ್ ಬಳಿ ಇತ್ತೀಚೆಗೆ ಸೇವಾಭದ್ರತೆ ಮತ್ತು ನೇಮಕಾತಿಯಲ್ಲಿ ಪ್ರಥಮ ಆದ್ಯತೆ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಇಲಾಖೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಹೊರಗುತ್ತಿಗೆ ಮತ್ತು ಸಿಡಿಸಿ ನೌಕರರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿತ್ತು.
ಪ್ರತಿಭಟನಕಾರರು, ಉನ್ನತ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅನ್ ಸ್ಕಿಲ್ಡ್ ಡಿ ದರ್ಜೆ ನೌಕರರಾಗಿ ಕೇವಲ 2 ಸಾವಿರ ರೂ. ವೇತನಕ್ಕೆ ದುಡಿಯುತ್ತಿದ್ದೇವೆ. ಜೊತೆಗೆ ಕಾಲೇಜು ಆಡಳಿತ ಸಮಿತಿ (ಸಿಡಿಸಿ) ಮೂಲಕ ನೇಮಕವಾಗಿ ಕಾಲೇಜಿನ ತರಗತಿ ಕೊಠಡಿಗಳ ಸ್ವಚ್ಚತೆ, ಶೌಚಾಲಯ ಸ್ವಚ್ಛತೆ, ಪ್ರಯೋಗಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವವವರು ಕನಿಷ್ಠ ವೇತನವಿಲ್ಲದೇ ದುಡಿಯುತ್ತಿದ್ದೇವೆ. ನಾವು ಡಿ ಗ್ರೂಪ್ ಹಾಗೂ ಡೇಟಾ ಎಂಟ್ರಿ ಆಪರೇಟರ್ಗಳಾಗಿ ಸುಮಾರು 20 ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ. ಆದರೂ ನಮಗೆ ಸೇವಾ ಭದ್ರತೆ ಇಲ್ಲ. ಇದೀಗ ಕಾಲೇಜಿನ ಪ್ರಾಂಶುಪಾಲರು ಕೆಲಸದಿಂದ ಬಿಡುಗಡೆ ಮಾಡುವ ಭೀತಿ ಎದುರಾಗಿದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದ್ದರು.