ಬೆಳಗಾವಿ: ಒಕ್ಕಲಿಗರ ಮೀಸಲಾತಿ ಪ್ರಮಾಣ ಹೆಚ್ಚಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಒಕ್ಕಲಿಗ ಸಚಿವರು, ಶಾಸಕರ ನಿಯೋಗದಿಂದ ಮನವಿ ಸಲ್ಲಿಸಲಾಯಿತು.
ಸುವರ್ಣ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳನ್ನು, ಸಚಿವರಾದ ಡಾ.ನಾರಾಯಣಗೌಡ, ಆರ್ ಅಶೋಕ್, ಡಾ.ಸಿ.ಎನ್ ಅಶ್ವತ್ಥ ನಾರಾಯಣ್, ಆರಗ ಜ್ಞಾನೇಂದ್ರ, ಕೆ.ಗೋಪಾಲಯ್ಯ, ಎಸ್ ಟಿ ಸೋಮಶೇಖರ್, ಸುಧಾಕರ್ ಮತ್ತು ಶಾಸಕರಾದ ಕೃಷ್ಣಪ್ಪ, ಕೆ.ಜಿ ಬೋಪಯ್ಯ, ಸುಕುಮಾರ ಶೆಟ್ಟಿ, ಡಾ.ರಾಜೇಶ ಗೌಡ, ಮಸಾಲಾ ಜಯರಾಂ, ತುಳಸಿ ಮುನಿರಾಜುಗೌಡ, ಸತೀಶ್ ರೆಡ್ಡಿ, ಎಂ ಕೆ ಪ್ರಾಣೇಶ್, ವೈ.ಎ. ನಾರಾಯಣಸ್ವಾಮಿ, ಜೀವರಾಜ್, ಭಾರತಿ ಶೆಟ್ಟಿ, ಚಿದಾನಂದಗೌಡ ಭೇಟಿಯಾಗಿ ಮನವಿ ಸಲ್ಲಿಸಿದರು.
ಒಕ್ಕಲಿಗರಿಗೆ ಮೀಸಲಾತಿ ನೀಡುವಂತೆ ಈಗಾಗಲೇ ದೊಡ್ಡ ಮಟ್ಟದ ಹೋರಾಟ ಆರಂಭವಾಗಿದೆ. ಕಾಂಗ್ರೆಸ್ ಪಕ್ಷದ ಒಕ್ಕಲಿಗ ಸಮುದಾಯದ ಶಾಸಕರು ನಿನ್ನೆ ಸುದ್ದಿಗೋಷ್ಠಿ ನಡೆಸಿ ಸರ್ಕಾರಕ್ಕೆ ಒತ್ತಾಯ ಮಾಡಿದ್ದರು. ಅಲ್ಲದೇ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮಾಹಿತಿ ರವಾನಿಸುತ್ತಿವೆ.
ಕಾಂಗ್ರೆಸ್ ಒಕ್ಕಲಿಗ ನಾಯಕರಿಂದ ಮನವಿ: ಒಕ್ಕಲಿಗ ಜನಾಂಗಕ್ಕೆ ಶೇ.12ರ ಮೀಸಲಾತಿ ಕಲ್ಪಿಸಲು ಕೇಂದ್ರಕ್ಕೆ ಯಾವುದೇ ಶಿಫಾರಸು ಮಾಡುವ ಅವಶ್ಯಕತೆ ಕಂಡುಬರುವುದಿಲ್ಲ. ಒಕ್ಕಲಿಗ ಜನಾಂಗ ಈಗಾಗಲೇ ಕೇಂದ್ರದ ಒಬಿಸಿ ಪಟ್ಟಿಯಲ್ಲಿರುವುದರಿಂದ ರಾಜ್ಯ ಸರ್ಕಾರವೇ ಸ್ವಯಂ ನಿರ್ಣಯದೊಂದಿಗೆ ಮೀಸಲು ಹೆಚ್ಚಳ ಘೋಷಣೆ ಮಾಡಬಹುದು. ಇತರ ಸಮುದಾಯಗಳ ಮೀಸಲಾತಿ ಹೋರಾಟಕ್ಕೆ ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ. ಅದರೆ ನಮಗೆ ಆಗಿರುವ ಮೀಸಲಾತಿ ಅನ್ಯಾಯದ ವಿರುದ್ಧ ನಮ್ಮ ಹೋರಾಟ ನಡೆಯಲಿದೆ ಎಂದು ಕಾಂಗ್ರೆಸ್ ನಾಯಕರು ನಿನ್ನೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದರು.
ಒಕ್ಕಲಿಗರ ಜನಸಂಖ್ಯೆಯು ರಾಜ್ಯದಲ್ಲಿ ಅಂದಾಜು ಒಂದು ಕೋಟಿ ಇಪ್ಪತ್ತು ಲಕ್ಷ ಇದೆ. ಹಳೆ ಮೈಸೂರು, ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಹೆಚ್ಚಿನ ಸಂಖ್ಯೆಯ ಒಕ್ಕಲಿಗ ಜನಾಂಗ ವಾಸಿಸುತ್ತಿದೆ. ಒಕ್ಕಲಿಗ ಜನಾಂಗಕ್ಕೆ ಮೀಸಲಾತಿ ವಿಚಾರವಾಗಿ ಹಿಂದಿನಿಂದಲೂ ರಾಜಕೀಯ, ಶೈಕ್ಷಣಿಕ, ಆರ್ಥಿಕವಾಗಿ ಉದ್ಯೋಗದಲ್ಲಿ ಅನ್ಯಾಯವಾಗುತ್ತಿದೆ. ಹಾವನೂರು ಆಯೋಗದ ವರದಿಯನುಸಾರ ಈ ಜನಾಂಗಕ್ಕೆ ಶೇ.11ರಷ್ಟು ಮೀಸಲಾತಿ ಸಿಕ್ಕಿದ್ದು ಬಿಟ್ಟರೆ ನಂತರ ಬಂದ ಚೆನ್ನಪ್ಪರೆಡ್ಡಿ ಆಯೋಗ ಕೇವಲ ಶೇ4ರಷ್ಟು ಮೀಸಲಾತಿ ಕಲ್ಪಿಸಿದೆ. ಅದು ಒಕ್ಕಲಿಗ ಜನಾಂಗಕ್ಕೆ ಮಾತ್ರ ಸೀಮಿತವಾಗದೇ ಇನ್ನಿತರ ವರ್ಗಗಳಿಗೂ ಸೇರಿ ಹಂಚಿಕೆಯಾಗಿದೆ ಎಂದು ಹೇಳಿದ್ದರು.
ಇದೀಗ ಒಕ್ಕಲಿಗರಿಗೆ ಮೀಸಲಾತಿ ನೀಡಬೇಕೆಂಬ ವಿಚಾರ ಒಂದೆಡೆ ಹೋರಾಟ ಹಾಗೂ ಇನ್ನೊಂದೆಡೆ ಮನವಿ ರೂಪದಲ್ಲಿ ಬರುತ್ತಿದ್ದು, ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದೆ.
ಇದನ್ನೂ ಓದಿ: ಜನಸಂಖ್ಯೆ ಆಧರಿಸಿ ಮೀಸಲಾತಿ ನೀಡಲಿ: ಸಚಿವ ಆರ್ ಅಶೋಕ್