ಬೆಳಗಾವಿ: ಸರ್ಕಾರದಿಂದ ಬರಬೇಕಾಗಿರುವ ನೆರೆ ಪರಿಹಾರದ ಹಣ ಮಂಜೂರು ಮಾಡಲು ಗ್ರಾಮ ಲೆಕ್ಕಾಧಿಕಾರಿಯೊಬ್ಬರು ಹಣ ಕೇಳುತ್ತಿದ್ದಾರೆ ಎಂದು ಆರೋಪಿಸಿ, ಡಿಸಿ ಕಚೇರಿ ಎದುರು ಗೋಕಾಕ್ ತಾಲೂಕಿನ ಲೋಳೆಸೂರ ಗ್ರಾಮದ ಸಂತ್ರಸ್ತೆ ಪ್ರತಿಭಟನೆ ನಡೆಸಿದ್ರು.
2019ರಲ್ಲಿ ಭೀಕರ ಪ್ರವಾಹಕ್ಕೆ ತುತ್ತಾಗಿ ಗೋಕಾಕ್ ತಾಲೂಕಿನ ಲೋಳಸೂರ ಗ್ರಾಮದಲ್ಲಿನ ಸಾಕಷ್ಟು ಮನೆಗಳು ಕೊಚ್ಚಿಕೊಂಡು ಹೋಗಿದ್ದವು. ಅದರಂತೆ ಲೋಳಸೂರ ಗ್ರಾಮದ ಲಕ್ಷ್ಮವ್ವ ತಳವಾರ ಎಂಬುವವರ ಮನೆ ಕೂಡ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿತ್ತು. ಈ ಸಂಬಂಧ ಅಲ್ಲಿನ ಗ್ರಾಮ ಲೆಕ್ಕಾಧಿಕಾರಿ, ಪಿಡಿಒ ಹಾಗೂ ತಾಂತ್ರಿಕ ಅಧಿಕಾರಿಗಳು ಪ್ರವಾಹದಿಂದ ಮನೆ ಕೊಚ್ಚಿಕೊಂಡು ಹೋಗಿರುವುದರ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.
ಈಗ ಮನೆ ಕಳೆದುಕೊಂಡು ಏಳು ತಿಂಗಳಾದರೂ ಪರಿಹಾರ ಬಂದಿಲ್ಲ. ಈ ಕುರಿತು ಗ್ರಾಮಲೆಕ್ಕಾಧಿಕಾರಿಗಳನ್ನು ಪ್ರಶ್ನಿಸಿದ್ರೆ ಹಣ ನೀಡುವಂತೆ ಪೀಡಿಸುತ್ತಿದ್ದಾರೆ ಎಂದು ಸಂತ್ರಸ್ತೆ ತಮ್ಮ ಅಳಲು ತೊಡಗಿಕೊಂಡರು. ಅಲ್ಲದೇ ಈ ಕುರಿತು ಗೋಕಾಕ್ ತಾಲೂಕಿನ ತಹಶೀಲ್ದಾರ್ ಅವರನ್ನು ಖುದ್ದಾಗಿ ಭೇಟಿಯಾದರು, ಅವರು ಇವತ್ತು ಬಾ.. ನಾಳೆ ಬಾ ಎಂದು ಕಳೆದ ನಾಲ್ಕು ತಿಂಗಳಿಂದ ಅಲೆದಾಡಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹೀಗಾಗಿ ಮತ್ತೆ ಗ್ರಾಮ ಲೆಕ್ಕಾಧಿಕಾರಿಗಳ ಬಳಿಗೆ ಹೋದರೆ ಅವರು ಹತ್ತು ಸಾವಿರ ಹಣ ನೀಡಿದರೆ ಮಾತ್ರ ಪರಿಹಾರ ಬರುವಂತೆ ಮಂಜೂರು ಮಾಡುತ್ತೇನೆ ಎನ್ನುತ್ತಾರೆ. ಈಗಾಗಲೇ ಏಳು ತಿಂಗಳಿಂದ ಬಾಡಿಗೆ ಮನೆಯಲ್ಲಿ ವಾಸವಿದ್ದು, ಇದ್ದ ಮಕ್ಕಳನ್ನು ಕೂಡ ಸಂಬಂಧಿಕರ ಮನೆಗೆ ಕಳುಹಿಸಿದ್ದೇವೆ. ಈಗಿರಲು ಮನೆ ಇಲ್ಲ. ಹೀಗಾಗಿ ನಮಗೆ ಹಣ ನೀಡಲು ಸಾಧ್ಯವಿಲ್ಲ. ಜಿಲ್ಲಾಧಿಕಾರಿಗಳು ಪರಿಹಾರ ದೊರಕಿಸಿಕೊಡಬೇಕು. ಅಲ್ಲಿನ ಗ್ರಾಮ ಲೆಕ್ಕಾಧಿಕಾರಿ ಎಸ್. ಎಸ್.ಹಿರೇಮಠ್ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.