ಬೆಳಗಾವಿ: ನೇಕಾರರ ಬಡ ಕುಟುಂಬಗಳಿಗೆ ಕಾರ್ಮಿಕ ಇಲಾಖೆಯಿಂದ ದಿನಸಿ ಕಿಟ್‌ಗಳನ್ನು ವಿತರಿಸಲಾಗುತ್ತಿದ್ದು, ಸಿಕ್ಕಿದ್ದೇ ಸೀರುಂಡೆ ಎಂಬಂತೆ ಕಾರ್ಮಿಕರು ಒಬ್ಬೊಬ್ಬರು ನಾಲ್ಕೈದು ಕಿಟ್‌ಗಳನ್ನು ತೆಗೆದುಕೊಂಡು ಕಾಲ್ಕಿತ್ತಿದ್ದಾರೆ.
ನಗರದ ಚೆನ್ನಮ್ಮ ವೃತ್ತದ ಬಳಿ ಇರುವ ತಮ್ಮ ಕಚೇರಿಯಲ್ಲಿ ಬೆಳಿಗ್ಗೆ 500 ಜನರಿಗೆ ಸಚಿವ ಸುರೇಶ್ ಅಂಗಡಿ ಕಿಟ್‌ಗಳನ್ನು ವಿತರಿಸಿದ್ದರು. ಈ ವಿಷಯ ತಿಳಿದ ವಡಗಾಂವಿ ಸೇರಿದಂತೆ ಇತರ ನಗರದ ನೇಕಾರಿಕೆ ಮಾಡುವ ನೂರಾರು ಕುಟುಂಬಗಳು, ಮಧ್ಯಾಹ್ನ 3 ಗಂಟೆಗೆ ಏಕಾಏಕಿ ಸಚಿವರ ಕಚೇರಿ ಬಳಿ ಜಮಾಯಿಸಿದ್ರು.
ಆದರೆ ದಿನಸಿ ಕಿಟ್ ವಿತರಿಸಲು ವಿಳಂಬವಾದಂತೆ ಮಹಿಳೆಯರ ಸಂಖ್ಯೆಯೂ ಹೆಚ್ಚಾಯಿತು. ಇದರಿಂದಾಗಿ ನುಕ್ಕುನುಗ್ಗಲು ಆರಂಭವಾಯಿತು. ಸಾವಿರಾರು ಮಹಿಳೆಯರು ಸಾಮಾಜಿಕ ಅಂತರ ಮರೆತು, ಮಾಸ್ಕ್ ಧರಿಸದೆ ಆತಂಕ ಸೃಷ್ಟಿಸಿದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಚೆನ್ನಮ್ಮ ಪಡೆ, ಮಹಿಳೆಯರ ಮೇಲೆ ಲಘು ಲಾಠಿ ಪ್ರಹಾರ ನಡೆಸಿತು. ಆದ್ರೂ ಏನೂ ಪ್ರಯೋಜನವಾಗಲಿಲ್ಲ. ಮಹಿಳೆಯರು ಮಾತ್ರ ಕೊರೊನಾ ಭಯವೇ ಇಲ್ಲದಂತೆ ಒಬ್ಬರಿಗೊಬ್ಬರು ಅಂಟಿಕೊಂಡೇ ದಿನಸಿ ಕಿಟ್ಗಾಗಿ ಹರಸಾಹಸ ಪಡುತ್ತಿದ್ದರು.
ಈ ಕುರಿತಾಗಿ ಸುರೇಶ್ ಅಂಗಡಿ ಮಾತನಾಡಿ, ಎಲ್ಲಾ ಕುಟುಂಬದ ಸದಸ್ಯರಿಗೆ ಕಿಟ್ ನೀಡಲಾಗುತ್ತಿದೆ. ಈಗಾಗಲೇ 500 ಕಿಟ್‌ಗಳನ್ನು ವಿತರಿಸಲಾಗಿದೆ. ಮಹಿಳೆಯರು ಶಾಂತಿಯುತವಾಗಿ ಸಾಲುಗಟ್ಟಿ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡು ಕಿಟ್‌ಗಳನ್ನು ಪಡೆದುಕೊಳ್ಳಬೇಕು. ಸರ್ಕಾರದಿಂದ ಬಡ ಜನರ ಹಸಿವು ನೀಗಿಸಲು ದಿನಸಿ ಕಿಟ್ ನೀಡಲಾಗುತ್ತಿದೆ. ಇನ್ನೂ 2 ಸಾವಿರ ಕಿಟ್‌ಗಳು ಕಚೇರಿಯಲ್ಲಿವೆ. ಗದ್ದಲ ಸೃಷ್ಟಿಸುವುದು ಸರಿಯಲ್ಲ. ಆಧಾರ್ ಕಾರ್ಡ್ಗಳನ್ನು ಗುರುತಿಸಿ ಕಿಟ್‌ಗಳು ನೀಡಲು ಹೇಳಲಾಗಿದೆ. ಇಲ್ಲವಾದಲ್ಲಿ ಮನೆವರೆಗೆ ತಲುಪಿಸಲು ಸೂಚನೆ ನೀಡಿದ್ದೇನೆ ಎಂದರು.
ಆಧಾರ ಕಾರ್ಡ್ ಗುರುತಿಸಿ ದಿನಸಿ ಕಿಟ್‌ಗಳನ್ನು ಓರ್ವ ಕುಟುಂಬದ ಸದಸ್ಯರಿಗೆ ಒಂದು ಕಿಟ್ ಮಾತ್ರ ನೀಡಲಾಗುತ್ತಿತ್ತು. ಆದರೆ ಕೆಲವರು ಮಾತ್ರ ಇದನ್ನೇ ದುರುಪಯೋಗಪಡಿಸಿಕೊಂಡು ಒಬ್ಬೊಬ್ಬರು ನಾಲ್ಕೈದು ಕಿಟ್‌ಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ಕಚೇರಿಯಿಂದ ಮನೆಗೆ ತೆರಳುತ್ತಿದ್ದ ಸಚಿವ ಸುರೇಶ್ ಅಂಗಡಿ, ಇದನ್ನು ಕಂಡು ದಂಗಾಗಿ ಕಾರಿನಿಂದ ಇಳಿದು ಮಹಿಳೆಯರ ಹತ್ರ ಬಂದು ಏನ್ರಮ್ಮಾ ಇದು, ಬಡವರಿಗಾಗಿ ಕೊಡ್ತಿರೋದು ಕಿಟ್. ಹೀಗೆ ಮಾಡಿದ್ರೆ ಹೇಗೆ ಎಂದು ಬೇಸರ ವ್ಯಕ್ತಪಡಿಸಿದರು.