ಬೆಳಗಾವಿ : ಬೈಲಹೊಂಗಲ ತಾಲೂಕಿನ ಮೆಡಿಕಲ್ ಸ್ಟೋರ್‌ಗಳಲ್ಲಿ ಮಾಸ್ಕ್ ಹಾಗೂ ಹ್ಯಾಂಡ್ ಸ್ಯಾನಿಟೈಸರ್ ಕೊರತೆ ಉಂಟಾಗಿದೆ.
ಕೇಂದ್ರ ಸರ್ಕಾರ ಆದೇಶದಂತೆ ಈಗಾಗಲೇ ದೇಶದಲ್ಲಿ ಲಾಕ್ಡೌನ್ ಇದೆ. ಆದರೆ, ವೈರಸ್ ಹರಡದಂತೆ ತಡೆಯಲು ಬೇಕಾದ ಅಗತ್ಯ ವಸ್ತುಗಳಾದ ಸ್ಯಾನಿಟೈಸರ್ ಹಾಗೂ ಮಾಸ್ಕ್‌ಗಳ ಪೂರೈಕೆ ಇಲ್ಲದೇ ಇರುವುದರಿಂದ ತಾಲೂಕಿನ ಜನರಲ್ಲಿ ಮತ್ತಷ್ಟು ಕೊರೊನಾ ಭೀತಿ ಆವರಿಸುತ್ತಿದೆ.
ಜಿಲ್ಲಾಡಳಿತ ಮಾತ್ರ ಸ್ಯಾನಿಟೈಸರ್ ಹಾಗೂ ಮಾಸ್ಕ್ಗಳನ್ನು ಅಗತ್ಯವಾಗಿ ಎಲ್ಲರಿಗೂ ವಿತರಿಸುವಲ್ಲಿ ಕ್ರಮಕೈಗೊಳ್ಳುವುದಾಗಿ ಹೇಳುತ್ತಲಿದೆ. ಈವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ಇದರಿಂದಾಗಿ ಜಿಲ್ಲೆಯ ಮೆಡಿಕಲ್ ಸ್ಟೋರ್‌ಗಳಲ್ಲಿ ಮಾಸ್ಕ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಬೇಡಿಕೆ ಹೆಚ್ಚಾದಂತೆ ಮಾಸ್ಕ್‌ಗಳ ದರವೂ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಮಾಸ್ಕ್‌ಗಳ ಅವಶ್ಯಕತೆಯನ್ನರಿತ ಕೆಲ ಮೆಡಿಕಲ್ ಸ್ಟೋರ್ ಮಾಲೀಕರು ಅವುಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.