ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದ ಕೃಷ್ಣಾ, ಧೂದಗಂಗಾ, ವೇದಗಂಗಾ, ಪಂಚಗಂಗಾ ನದಿ ನೀರಿನ ಹರಿವಿನಲ್ಲಿ ಕಡಿಮೆಯಾಗಿದೆ, ಇದರಿಂದ ಆತಂಕದಲ್ಲಿದ್ದ ನದಿ ತೀರದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ಹರಿದು ಬರುವ ನೀರಿನ ಮಟ್ಟದಲ್ಲಿ ಬಹಳಷ್ಟು ಕಡಿಮೆಯಾಗಿದೆ. ಆದ್ದರಿಂದ ದೂಧಗಂಗಾ, ವೇದಗಂಗಾ ನದಿಗಳ ಹರಿವಿನ ಮಟ್ಟ ಇಳಿದಿದೆ. ಕೃಷ್ಣಾ ನದಿ ನೀರು ಸುಮಾರು 4 ಅಡಿಯಷ್ಟು ಇಳಿಕೆಯಾಗಿದೆ.
ಕಳೆದ ನಾಲ್ಕೈದು ದಿನಗಳಿಂದ ಜಲಾವೃತಗೊಂಡಿದ್ದ ದೂಧಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಕಾರದಗಾ-ಭೋಜ, ಮಲಿಕವಾಡ-ದತ್ತವಾಡ, ಕುನ್ನೂರ-ಬಾರವಾಡ, ಭೋಜವಾಡಿ-ಕುನ್ನೂರ ಮತ್ತು ಕೃಷ್ಣಾ ನದಿಗೆ ಯಡೂರ ಬಳಿ ಅಡ್ಡಲಾಗಿ ನಿರ್ಮಿಸಿರುವ ಕಲ್ಲೋಳ-ಯಡೂರ ಸೇತುವೆ ಸೇರಿದಂತೆ ಕೆಳ ಹಂತದಲ್ಲಿರುವ ನೀರಿನಲ್ಲಿ ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿರುವ 5 ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿವೆ.