ಚಿಕ್ಕೋಡಿ: ಬೆಳೆಹಾನಿ ಪರಿಹಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾದರಿಯನ್ನು ಅಧ್ಯಯನ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಧ್ಯಯನ ವರದಿಯ ಬಳಿಕ ಸರ್ಕಾರದ ಆರ್ಥಿಕ ಸ್ಥಿತಿ ಆಧರಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ದರೂರ ಗ್ರಾಮದಲ್ಲಿ ನಡೆದ ಪರಿಹಾರ ವಿತರಣೆ ಅಹವಾಲು ಸ್ವೀಕಾರ ಸಭೆಯಲ್ಲಿ ಅವರು ಮಾತನಾಡಿ ಪ್ರವಾಹದಿಂದ ಮನೆ, ಬೆಳೆ ಕಳೆದುಕೊಂಡು ಜನರು ಸಂಕಷ್ಟದಲ್ಲಿದ್ದು, ಸಂತ್ರಸ್ತರಿಗೆ ರಾಜ್ಯ ಸರ್ಕಾರ ಸಾಧ್ಯವಿರುವ ಎಲ್ಲ ನೆರವು ನೀಡಿದೆ. ರಾಜ್ಯದ ಹಣಕಾಸು ಪರಿಸ್ಥಿತಿ ಸರಿ ಇಲ್ಲದಿದ್ದರೂ ಪ್ರವಾಹದಿಂದ ಸಂಪೂರ್ಣ ಮನೆ ಕಳೆದುಕೊಂಡಿರುವವರಿಗೆ ಐದು ಲಕ್ಷ ರೂಪಾಯಿ ನೀಡಲು ಸರ್ಕಾರ ನಿರ್ಧರಿಸಿದೆ ಎಂದರು.
ರೈತರು ಒಪ್ಪಿದರೆ ಶಾಶ್ವತ ಸ್ಥಳಾಂತರಕ್ಕೆ ಸರ್ಕಾರ ಸಿದ್ಧವಿದೆ. ಕೆಲವು ವರ್ಷಗಳ ಹಿಂದೆ ಸ್ಥಳಾಂತರ ಮಾಡಿದ ಗ್ರಾಮಗಳಿಗೆ ಜನರು ಹೋಗಲಿಲ್ಲ. ಗ್ರಾಮಸ್ಥರು ಒಟ್ಟಾಗಿ ಸಂಪೂರ್ಣ ಗ್ರಾಮ ಸ್ಥಳಾಂತರಕ್ಕೆ ಒಪ್ಪಿಗೆ ನೀಡಿದರೆ ತಕ್ಷಣ ಸ್ಥಳಾಂತರಕ್ಕೆ ಕ್ರಮ ಜರುಗಿಸಲಾಗುವುದು.16 ಗ್ರಾಮಗಳಿಗೆ ನೀರು ಪೂರೈಸುವ 89 ಕೋಟಿ ರೂಪಾಯಿ ವೆಚ್ಚದ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಹದಿನೈದು ದಿನಗಳಲ್ಲಿ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಸಹಕಾರಿ ಸಂಸ್ಥೆ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾಲಮನ್ನಾ ಯೋಜನೆಗೆ ಸರ್ಕಾರ ಬದ್ಧವಾಗಿದೆ. ಎನ್.ಡಿ.ಆರ್.ಎಫ್. ಮಾರ್ಗಸೂಚಿ ಪರಿಷ್ಕರಣೆಗೆ ಪ್ರಧಾನಮಂತ್ರಿಗಳ ಗಮನಕ್ಕೆ ತರಲಾಗುವುದು. ಇದಕ್ಕಾಗಿ ಪ್ರಧಾನಿ ಮತ್ತು ಗೃಹಸಚಿವರ ಬಳಿಗೆ ನಿಯೋಗ ಕೊಂಡೊಯ್ಯಲಾಗುವುದು. ಎನ್.ಡಿ.ಆರ್.ಎಫ್. ಮಾರ್ಗಸೂಚಿಗಳ ಪರಿಷ್ಕರಣೆ ಮಾಡಿದರೆ ಮಾತ್ರ ಹೆಚ್ಚಿನ ಪರಿಹಾರ ನೀಡುವುದು ಸಾಧ್ಯವಾಗಲಿದೆ ಎಂದು ಹೇಳಿದ್ರು.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ 1212 ಮನೆಗಳು ಬಿದ್ದಿವೆ, 1 ಲಕ್ಷದಂತೆ ಈಗಾಗಲೇ 300 ಮನೆಗಳಿಗೆ ಪರಿಹಾರ ಕೊಡಲಾಗಿದೆ. 2009 ರಲ್ಲಿ ಪರಿಹಾರ ಕೊಟ್ಟರೂ ಸಹ ಯಾರು ಮನೆ ಖಾಲಿ ಮಾಡಲಿಲ್ಲ. ಅದಕ್ಕಾಗಿ ನೀವೆ ಯೋಚನೆ ಮಾಡಿ ಎತ್ತರದ ಸ್ಥಳಕ್ಕೆ ಹೋಗ್ತಿರೋ ಅಥವಾ ಈಗಿರುವ ಜಾಗದಲ್ಲೇ ಇರ್ತಿರೋ, 6 ರಿಂದ 7 ಲಕ್ಷದಲ್ಲಿ ಒಳ್ಳೆಯ ಆರ್‌ಸಿಸಿ ಮನೆ ನಿರ್ಮಾಣ ಮಾಡಿಕೊಳ್ಳಬಹುದು ಎಂದರು.
ಅಥಣಿಯಲ್ಲಿ 32,996 ರೈತರಿಗೆ ಸಹಕಾರಿ ಸಾಲ 128 ಕೋಟಿ ಮನ್ನಾ ಆಗಿದೆ. ರಾಷ್ಟ್ರೀಕೃತ ಬ್ಯಾಂಕಗಳಲ್ಲಿ 3200 ಕ್ಕೂ ಹೆಚ್ಚು ಜನರ 2 ಲಕ್ಷ ಸಾಲ ಮನ್ನಾ ಆಗಿದೆ. ಪ್ರತಿ ಹೆಕ್ಟೇರ್ ಗೆ ಬೆಳೆ ಪರಿಹಾರ ಎನ್ ಡಿ ಆರ್ ಎಫ್ ನಿಂದ ನೀಡುತ್ತಿರುವ ಪರಿಹಾರ ಸಾಲುತ್ತಿಲ್ಲ, ಅದನ್ನು ಹೆಚ್ಚಿಸಲು ಪ್ರಧಾನಿ ಜತೆ ಮಾತನಾಡುವುದಾಗಿ ತಿಳಿಸಿದ್ರು.