ಬೆಳಗಾವಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಹಿನ್ನೆಲೆ ಸಿಡಿಯಲ್ಲಿದ್ದ ಯುವತಿ ತಂದೆ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಡಾ. ವಿಕ್ರಮ ಆಮಟೆ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ತಂದೆ ನನ್ನ ಮಗಳನ್ನು ಅಪರಿಚಿತರು ಯಾರೋ ಅಪಹರಣ ಮಾಡಿದ್ದಾರೆ ಅಂತಾ ನಿನ್ನೆ ರಾತ್ರಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಯುವತಿ ತಂದೆ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ. ಈಗಾಗಲೇ ಪ್ರಕರಣ ಕುರಿತಂತೆ ಮಾರ್ಕೆಟ್ ಎಸಿಪಿ, ಎಪಿಎಂಸಿ ಸಿಪಿಐ ಒಳಗೊಂಡ ವಿಶೇಷ ತನಿಖಾ ತಂಡ ರಚಿಸಿ ತನಿಖೆ ಕೈಗೊಳ್ಳಲಾಗಿದೆ ಎಂದರು.
ಇನ್ನು ಪ್ರಕರಣವನ್ನು ಎಸ್ಐಟಿಗೆ ಹಸ್ತಾಂತರಿಸುವ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಈಗ ತನಿಖೆ ಆರಂಭವಾಗಿದ್ದು, ತನಿಖೆಯಲ್ಲಿ ಏನು ಕಂಡು ಬರುತ್ತದೆ ಅದನ್ನು ನೋಡಿಕೊಂಡು ಎಸ್ಐಟಿ ವರ್ಗಾವಣೆ ಬಗ್ಗೆ ತೀರ್ಮಾನಿಸಲಾಗುವುದು. ಇನ್ನು ನಿನ್ನೆ ದೂರು ನೀಡಿದ ಕುಟುಂಬಸ್ಥರು ರಕ್ಷಣೆ ಕೇಳಿದ್ರೆ ಪೊಲೀಸ್ ಇಲಾಖೆಯಿಂದ ರಕ್ಷಣೆ ಒದಗಿಸಲಾಗುತ್ತದೆ ಎಂದರು.