ಚಿಕ್ಕೋಡಿ: ಜೊಲ್ಲೆ ಉದ್ಯೋಗ ಸಮೂಹದಿಂದ ನಿಪ್ಪಾಣಿ ಪಟ್ಟಣದ ಶಿವಶಂಕರ ಜೊಲ್ಲೆ ಪಬ್ಲಿಕ್ ಶಾಲೆಯಲ್ಲಿ 40 ಹಾಸಿಗೆಯ ಕೋವಿಡ್ ಆಸ್ಪತ್ರೆಯನ್ನು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಲೋಕಾರ್ಪಣೆಗೊಳಿಸಿದರು.
ನೆರೆಯ ಮಹಾರಾಷ್ಟ್ರ ಸೇರಿದಂತೆ ನಿಪ್ಪಾಣಿ ತಾಲೂಕಿನಲ್ಲಿ ಕೊರೊನಾ ತನ್ನ ಅಟ್ಟಹಾಸ ಮೆರೆಯುತ್ತಿದೆ. ಇದನ್ನರಿತ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆಯವರು, ಆರೋಗ್ಯ ಕೇಂದ್ರದ ಸಹಕಾರದಿಂದ ನಿಪ್ಪಾಣಿಯಲ್ಲಿ ತಮ್ಮದೆಯಾದ ಶಿವಶಂಕರ ಜೊಲ್ಲೆ ಪಬ್ಲಿಕ್ ಶಾಲೆಯಲ್ಲಿ 40 ಹಾಸಿಗೆಯ ಕೋವಿಡ್ ಆಸ್ಪತ್ರೆಯನ್ನು ಆರಂಭಿಸಿದ್ದಾರೆ. ಇಂದು ಈ ಕೋವಿಡ್ ಆಸ್ಪತ್ರೆಯನ್ನು ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ ಲೋಕಾರ್ಪಣೆಗೊಳಿಸಿದರು.
ನಂತರ ಅವರು ಮಾತನಾಡಿ, ನಿಪ್ಪಾಣಿಯು ಮಹಾರಾಷ್ಟ್ರದ ಗಡಿಯಲ್ಲಿ ಇರುವುದರಿಂದ ಕೊರೊನಾ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ಪತ್ತೆಯಾಗುತ್ತಿರುವುದನ್ನು ಮನಗಂಡು ನಿಪ್ಪಾಣಿಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಸಂಸದ ಅಣ್ಣಾಸಾಹೇಬ ಜೊಲ್ಲೆಯವರು ಸ್ವಖರ್ಚಿನಿಂದ ಕೋವಿಡ್ ಆಸ್ಪತ್ರೆ ಆರಂಭಿಸಿರುವುದು ಶ್ಲಾಘನೀಯ ಎಂದರು.
ಸಂಪೂರ್ಣ ಲಾಕ್ಡೌನ್ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಲಾಕ್ಡೌನ್ ಕಠಿಣಗೊಳಿಸುವುದು ಅನಿವಾರ್ಯವಾಗಿದೆ ಎಂದರು.
ಬೆಡ್ ದಂಧೆಯಲ್ಲಿ ಬಿಜೆಪಿ ಶಾಸಕರ ಭಾಗಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬೆಡ್ ದಂಧೆ ಹಗರಣವನ್ನ ಬಯಲಿಗೆ ಎಳೆದವರೇ ಶಾಸಕ ಸತೀಶ ರೆಡ್ಡಿ, ಸಂಸದ ತೇಜಸ್ವಿ ಸೂರ್ಯ ಅವರು ಹೇಗೆ ದಂಧೆಯಲ್ಲಿ ಶಾಮೀಲಾಗುತ್ತಾರೆ? ಇದರ ಹಿಂದೆ ಯಾರ ಕೈವಾಡ ಇದೆ ಎಂಬುದು ಬಯಲಿಗೆ ಬಂದಿದೆ. ಹಗರಣ ಬಯಲಿಗೆಳೆದವರೇ ಶಾಮೀಲಾಗಿದ್ದಾರೆ ಎಂದರೆ ಏನು ಅರ್ಥ ಎಂದು ಬೆಡ್ ಹಗರಣದಲ್ಲಿ ಬಿಜೆಪಿ ಶಾಸಕರ ಕೈವಾಡ ವಿಚಾರ ತಳ್ಳಿ ಹಾಕಿದರು.
ನಂತರ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರುಡುತ್ತಿದೆ. ಈ ನಿಟ್ಟಿನಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆಯನ್ನು ಇಟ್ಟಿದೆ. ನಿಪ್ಪಾಣಿಯು ಮಹಾರಾಷ್ಟ್ರದ ಗಡಿಯ ಹತ್ತಿರ ಇರುವುದರಿಂದ ಹಾಗೂ ನಿಪ್ಪಾಣಿ ಕ್ಷೇತ್ರದ ಆರೋಗ್ಯದ ಹಿತದೃಷ್ಟಿಯಿಂದ ಕೊರೊನಾ ರೋಗಿಗಳ ಅನುಕೂಲಕ್ಕಾಗಿ ಶಿವಶಂಕರ ಜೊಲ್ಲೆ ಪಬ್ಲಿಕ್ ಶಾಲೆಯಲ್ಲಿ 40 ಹಾಸಿಗೆಯ ಕೋವಿಡ್ ಆಸ್ಪತ್ರೆಯನ್ನು ಆರಂಭಿಸಿದ್ದೇವೆ ಎಂದರು.
ಅಧಿಕಾರಿಗಳ ನಿರ್ಲಕ್ಷ್ಯ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈಗಾಗಲೇ ನಾನು ವಿಜಯಪುರ ಹಾಗೂ ನಿಪ್ಪಾಣಿ ಮತಕ್ಷೇತ್ರ ಎರಡು ಕಡೆ ಕೋವಿಡ್ ರೋಗಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದೇನೆ. ಅಧಿಕಾರಿಗಳು ಫೋನ್ ಕರೆ ಸ್ವೀಕರಿಸದಿರುವುದರ ಬಗ್ಗೆ ನನಗೆ ಗೊತ್ತಿಲ್ಲ, ಅಂಥದ್ದು ಏನಾದರೂ ಕಂಡು ಬಂದಲ್ಲಿ ಅವರ ವಿರುದ್ದ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.