ಬೆಳಗಾವಿ: ಕೊರೊನಾ ಸೋಂಕಿನಿಂದ ಮೃತಪಟ್ಟ ಸಾರಿಗೆ ಇಲಾಖೆಯ ಸಿಬ್ಬಂದಿ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ ಒದಗಿಸಲಾಗುವುದು ಎಂದು ಸಾರಿಗೆ ಸಚಿವ ಹಾಗೂ ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ಥಿಕ ಇಲಾಖೆಗೆ ಈಗಾಗಲೇ ಪ್ರಸ್ತಾವನೆ ಕಳುಹಿಸಲಾಗಿದೆ. ಹಣಕಾಸಿನ ತೊಂದರೆಯಿಂದಾಗಿ ಪರಿಹಾರ ಬಿಡುಗಡೆ ವಿಳಂಬವಾಗಿದೆ. ಐವತ್ತು ಜನ ಸಿಬ್ಬಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಮೃತರ ಪ್ರತೀ ಕುಟುಂಬಕ್ಕೆ ತಲಾ 30 ಲಕ್ಷ ರೂ. ಪರಿಹಾರ ತಲುಪಿಸಲಾಗುವುದು ಎಂದರು.
ಕೊರೊನಾ ಪರಿಣಾಮ ಸಾರಿಗೆ ಇಲಾಖೆ ಈಗಲೂ ನಷ್ಟದಲ್ಲಿದೆ. ಈಗ ಬರುತ್ತಿರುವ ಆದಾಯ ಡೀಸೆಲ್ಗೆ ಮಾತ್ರ ಸಾಲುತ್ತಿದೆ. ಆದಾಯ ಇಲ್ಲ ಅಂತ ಬಸ್ಗಳನ್ನು ಸ್ಥಗಿತಗೊಳಿಸಲು ಆಗುವುದಿಲ್ಲ. ಮೂರು ಸಾವಿರ ಕೋಟಿಗೂ ಅಧಿಕ ನಷ್ಟವನ್ನು ಸಾರಿಗೆ ಇಲಾಖೆ ಅನುಭವಿಸುತ್ತಿದೆ. ಹೀಗಾಗಿ ಸಿಬ್ಬಂದಿ ಸಂಬಳ ಎಂಟು ಹತ್ತು ದಿನ ತಡ ಆಗುತ್ತಿದೆ. ಸದ್ಯ ಸಾರಿಗೆ ಇಲಾಖೆಯಲ್ಲಿ 1 ಲಕ್ಷ 30 ಸಾವಿರ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಕಳೆದ ವರ್ಷ ಮತ್ತು ಪ್ರಸಕ್ತ ಸಾಲಿನ ಅತಿವೃಷ್ಟಿಯ ಪರಿಹಾರ ಕುರಿತು ಸಿಎಂ ಗಮನಕ್ಕೆ ತರಲಾಗಿದೆ. ಕೃಷಿ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ಸರ್ವೆ ಮಾಡುತ್ತಿವೆ. ರೈತರ ಬಗ್ಗೆ ಸಿಎಂ ಕಾಳಜಿ ಹೊಂದಿದ್ದಾರೆ. ಆದರೆ ಪರಿಸ್ಥಿತಿ ಯಡಿಯೂರಪ್ಪರನ್ನು ಕಟ್ಟಿ ಹಾಕಿದೆ. ಸರ್ಕಾರಕ್ಕೆ ಬರುತ್ತಿರುವ ಆದಾಯದಲ್ಲಿ ಕೊರತೆ ಆದಾಗ ತಕ್ಷಣ ಪರಿಹಾರ ಕೊಡಲು ಕಷ್ಟವಾಗಿದೆ. ಕೊರೊನಾದಿಂದ ಆರ್ಥಿಕ ವ್ಯವಸ್ಥೆ ಮೇಲೆ ಬಹಳಷ್ಟು ದುಷ್ಪರಿಣಾಮ ಬೀರಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ 33 ಸಾವಿರ ಕೋಟಿ ರೂ. ಸಾಲ ಕೊಡಲು ಮುಂದಾಗಿದೆ. ಹಣ ಬಂದ ಕೂಡಲೇ ಎಲ್ಲಾ ವ್ಯವಸ್ಥೆಗಳು ಸುಗಮವಾಗಲಿವೆ ಎಂದು ಹೇಳಿದರು.