ಅಥಣಿ(ಬೆಳಗಾವಿ): ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಅವರು ತಮ್ಮೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಕ್ವಾರಂಟೈನ್ ಆಗುವಂತೆ ಹೇಳಿದ್ದಾರೆ. ನಾನು ದೆಹಲಿಯಿಂದ ರಾಜ್ಯಕ್ಕೆ ಮರಳಿದಾಗ ಅವರನ್ನು ಭೇಟಿಯಾಗಿದ್ದೆ. ಆದ್ರೆ ನಮ್ಮಿಬ್ಬರ ನಡುವೆ ಸಾಕಷ್ಟು ಅಂತರ ಕಾಯ್ದುಕೊಂಡಿದ್ದೆವು ಎಂದು ಡಿಸಿಎಂ ಲಕ್ಷ್ಮಣ್ ಸವದಿ ಸ್ಪಷ್ಟಪಡಿಸಿದ್ದಾರೆ.
ಅಥಣಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಜ್ಯದ ಕೊರೊನಾ ನಿಯಂತ್ರಣದಲ್ಲಿ ಸಿಎಂ ಪಾತ್ರ ಬಹುಮುಖ್ಯ. ಹೀಗಾಗಿ ಆದಷ್ಟು ಬೇಗ ಅವರು ಗುಣಮುಖರಾಗಿ ಕಾರ್ಯೋನ್ಮುಖರಾಗಲಿ. ದೇವರು ಅವರಿಗೆ ಆರೋಗ್ಯ ದಯಪಾಲಿಸಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದರು.
ನಾನು ದೆಹಲಿಗೆ ಹೋಗಿಬಂದ ವಿಚಾರವನ್ನು ಮುಖ್ಯಮಂತ್ರಿ ಅವರಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ತಿಳಿಸಿದ್ದೇನೆ. ಹೀಗಾಗಿ ನಾನು ಕ್ವಾರೆಂಟೈನ್ ಆಗುವ ಅಗತ್ಯವಿಲ್ಲ. ಆಗುವುದೂ ಇಲ್ಲ ಎಂದರು.
ಮುಂದಿನ ಸಿಎಂ ಲಕ್ಷ್ಮಣ್ ಸವದಿ ವಿಚಾರ ಕುರಿತು ಪ್ರತಿಕ್ರಿಯಿಸಿ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಫೋಟೋಗಳಿಗೂ ನನಗೂ ಯಾವುದೇ ಸಂಬಂಧವಿಲ್ಲ, ಅವರವರ ಅಭಿಪ್ರಾಯಗಳನ್ನು ಜನ ಹಂಚಿಕೊಂಡಿದ್ದಾರೆ. ಇಂತ ಊಹಾಪೋಹಗಳಿಗೆ ಕಿವಿಗೊಡಬಾರದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ವದಂತಿಗಳನ್ನು ಹರಿಬಿಡಬಾರದರು ಎಂದು ಅಭಿಮಾನಿಗಳಿಗೆ ಮನವಿ ಮಾಡಿದರು.