ಬೆಳಗಾವಿ: ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮಾಡಿರುವ ಸಾಧನೆ ಮುಂದಿಟ್ಟುಕೊಂಡು ನಾವು ಬೆಳಗಾವಿಯಲ್ಲಿ ಪ್ರಚಾರ ಮಾಡಿ ಮಂಗಳಾ ಅಂಗಡಿ ಅವರನ್ನು ವಿಜಯಶಾಲಿಯನ್ನಾಗಿ ಮಾಡುತ್ತೇವೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.
ಏ.17 ರಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಇಂದು ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಬೆಳಗಾವಿಗೆ ಆಗಮಿಸಿದ ಡಿಸಿಎಂ ಗೋವಿಂದ ಕಾರಜೋಳ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ್ದು, ದಿ.ಸುರೇಶ್ ಅಂಗಡಿ ಸರಳ, ಸಜ್ಜನ ರಾಜಕಾರಣಿಯಾಗಿದ್ರು. ಅವರು ಕಾರ್ಯರೂಪಕ್ಕೆ ತಂದಿರುವ ಯೋಜನೆಗಳನ್ನು ನೋಡಿ ಬೆಳಗಾವಿ ಜನತೆ ಮಂಗಳಾ ಅಂಗಡಿ ಅವರಿಗೆ ಮತ ಹಾಕುತ್ತಾರೆ. ಅನೇಕರು ಮರಾಠಿ ಜನ ಬಡವರಿದ್ದಾರೆ. ಅವರಿಗೂ ಸಹಾಯ ಸಿಗಬೇಕಿದೆ. ಇದಕ್ಕೆ ಸಹಾಯವಾಗಲೆಂದು ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಮಾಡಿದೆ. ಬೆಳಗಾವಿ, ಮಸ್ಕಿ, ಬಸವಕಲ್ಯಾಣದಲ್ಲಿ ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತೈಲ ಬೆಲೆ ಏರಿಕೆ ವಿರುದ್ಧ ಜನ ಬೇಸತ್ತಿದ್ದು, ಆರ್‌ಎಸ್‌ಎಸ್ ಡೈರೆಕ್ಷನ್‌ನಲ್ಲಿ ಕೇಂದ್ರ ಸರ್ಕಾರ ಕೆಲಸ ಮಾಡ್ತಿದೆ ಎಂದು ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಸಿಎಂ ಬೆಲೆ ಏರಿಕೆಗೆ ಬೇರೆ ಕಾರಣಗಳಿವೆ. ಸಿದ್ದರಾಮಯ್ಯ ಐದು ವರ್ಷಗಳ ಕಾಲ ಏನೂ ಮಾಡದಿದ್ದಕ್ಕೆ ಮಾತಾಡ್ತಿದ್ದಾರೆ. ಸಿದ್ದರಾಮಯ್ಯ ತಮ್ಮ ಅಧಿಕಾರದ ಅವಧಿಯಲ್ಲಿ ಬೆಳಗಾವಿಗೆ ಏನು? ಕೊಟ್ಟಿದ್ದಾರೆ ಎಂದು ಹೇಳಲಿ. ಕಾಂಗ್ರೆಸ್‌ಗೆ ಏನೂ ಗುರಿಯಿಲ್ಲ. ವೋಟ್ ಬ್ಯಾಂಕ್ ರಾಜಕಾರಣ ಮಾಡಿದ್ದಾರೆ ಅಷ್ಟೇ. ದೇಶದ 23 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಐದು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ ಎಂದರು.
ಸಿಡಿ ಪ್ರಕರಣ ಉಪಚುನಾವಣೆಯಲ್ಲಿ ಬಿಜೆಪಿಗೆ ಮೈನಸ್ ಆಗುತ್ತೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ಹೇಳುತ್ತೇನೆ ಮೂರು ಕ್ಷೇತ್ರದಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತೆ ಎಂದು ಸವಾಲು ಹಾಕಿದರು.