ಬೆಳಗಾವಿ: ಶಾಲಾ ಮಕ್ಕಳಿಗೆ ಅಡುಗೆ ಮಾಡುತ್ತಿರುವ ಸಂದರ್ಭದಲ್ಲಿ ಶಾಲೆಯಲ್ಲಿಯೇ ಸಿಲಿಂಡರ್ ಸ್ಫೋಟವಾಗಿದ್ದು, ಆಹಾರ ಧಾನ್ಯಗಳು ಸುಟ್ಟು ಭಸ್ಮವಾಗಿವೆ. ಅದೃಷ್ಟವಶಾತ್ ಯಾವುದೇ ರೀತಿಯ ಜೀವಹಾನಿ ಸಂಭವಿಸಿಲ್ಲ.
ಬೆಳಗಾವಿ ಜಿಲ್ಲೆಯ ಗೋಕಾಕ್ನ ವಿವೇಕಾನಂದ ನಗರದಲ್ಲಿ ತಾಲೂಕಿನ ಗೋಡಚಿನಮಲ್ಕಿ ಗ್ರಾಮದಿಂದ ಸ್ಥಳಾಂತರಗೊಂಡಿರುವ ಡಾ ಬಿ ಆರ್ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಸಿಲಿಂಡರ್ ಸ್ಫೋಟವಾಗಿದೆ. ಬಿಸಿಯೂಟ ಅಡುಗೆ ಕೋಣೆಯಲ್ಲಿ ಅಡುಗೆ ಮಾಡುತ್ತಿರುವಾಗ ಸಿಲಿಂಡರ್ ಸ್ಫೋಟವಾಗಿ ಕೋಣೆಯ ಬಾಗಿಲು ಸುಟ್ಟು ಹೋಗಿದೆ. ಕೊಠಡಿಯೊಳಗಡೆ ಇರುವ ಬಿಸಿಯೂಟದ ಆಹಾರ ಪದಾರ್ಥಗಳು, ಪರಿಕರಗಳು ಸುಟ್ಟು ಕರಕಲಾಗಿವೆ.
ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿ: ಅಡುಗೆ ಮಾಡುತ್ತಿರುವಾಗ ಸಿಲಿಂಡರ್ನಿಂದ ಭಾರಿ ಶಬ್ದ ಬಂದಿದೆ. ತಕ್ಷಣವೇ ಅಡುಗೆ ಮಾಡುವ ಸಿಬ್ಬಂದಿ ಕೋಣೆಯಿಂದ ಹೊರಗೆ ಓಡಿಬಂದು ಜೀವ ಉಳಿಸಿಕೊಂಡಿದ್ದಾರೆ. ಬಳಿಕ ಕೋಣೆಯ ತುಂಬೆಲ್ಲ ಬೆಂಕಿ ಆವರಿಸಿ ಕಿಟಕಿ –ಬಾಗಿಲುಗಳು ಸುಟ್ಟು ಹೋಗಿವೆ. ಬಳಿಕ ಶಿಕ್ಷಕರ ಮಾಹಿತಿ ಮೇರೆಗೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಪೈಪ್ ಲೀಕೇಜ್ನಿಂದ ಅವಾಂತರ: ಸಿಲಿಂಡರ್‌ನ ರೆಗ್ಯುಲೇಟರ್ ಸಡಿಲಿಕೆ ಮತ್ತು ಪೈಪ್ ಲೀಕೇಜ್ ಆಗಿರುವುದೇ ಸ್ಫೋಟಕ್ಕೆ ಕಾರಣ ಎನ್ನಲಾಗಿದೆ. ಘಟನೆಯಿಂದ ಅಕ್ಕಿ, ಬೇಳೆ, ಹಾಲಿನ ಪೌಡರ್, ಮಕ್ಕಳಿಗೆ ನೀಡಲು ಮಾಡಲಾದ ದೋಸೆ ಹಿಟ್ಟು ಸೇರಿದಂತೆ ಪಾತ್ರೆಗಳು ಒಡೆದು ಹೋಗಿವೆ. ಗೋಕಾಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಓದಿ: ನವರಾತ್ರಿಯ ದೀಪ ತರುತ್ತಿದ್ದ ಯುವಕನಿಗೆ ವಾಹನ ಡಿಕ್ಕಿ.. ಸ್ಥಳದಲ್ಲಿಯೇ ಸಾವು