ಬೆಳಗಾವಿ : ಗೋವಾದಿಂದ ಲಾರಿಯಲ್ಲಿ ಪ್ಲೈವುಡ್ ಶೀಟುಗಳ ನಡುವೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಲಾರಿಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಲಾರಿ ಚಾಲಕ ಉತ್ತರಪ್ರದೇಶ ವಾರಣಾಸಿಯ ವಿರೇಂದ್ರ ಕಲ್ಪನಾಥ ಮಿಶ್ರಾನನ್ನು ಅಧಿಕಾರಿಗಳು ಬಂಧಿಸಿದ್ದು, 28 ಲಕ್ಷ ರೂ. ಮೌಲ್ಯದ 1927 ಲೀಟರ್ ವಿವಿಧ ಕಂಪನಿಯ ಮದ್ಯದ ಬಾಟಲಿಗಳನ್ನು ಹಾಗೂ 25 ಲಕ್ಷ ಮೌಲ್ಯದ ಲಾರಿಯನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಮದ್ಯ ಅಕ್ರಮ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಅಬಕಾರಿ ಅಧಿಕಾರಿಗಳು, ಶನಿವಾರ ಬೆಳಗಿನ ಜಾವ 3.30ರ ಸುಮಾರಿಗೆ ಕಾರ್ಯಾಚರಣೆ ನಡೆಸಿ ಸುವರ್ಣ ವಿಧಾನಸೌಧ ಮುಂಭಾಗದಲ್ಲಿ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅಬಕಾರಿ ಅಪರ ಆಯುಕ್ತ ಡಾ.ವೈ. ಮಂಜುನಾಥ್, ಗೋವಾದಿಂದ ಒಂದು ಲಾರಿಯಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಈ ಸಂಬಂಧ ಅಬಕಾರಿ ಅಧೀಕ್ಷಕ ವಿಜಯಕುಮಾರ್ ಹಿರೇಮಠ ನೇತೃತ್ವದ ತಂಡವು ಶುಕ್ರವಾರ ಮಧ್ಯಾಹ್ನದಿಂದ ಕಾರ್ಯಾಚರಣೆ ನಡೆಸಿತ್ತು. ಹಾಗಾಗಿ ಗೋವಾದಿಂದ ಬರುವ ಎಲ್ಲಾ ವಾಹನಗಳನ್ನು ತಪಾಸಣೆ ನಡೆಸಲಾಗುತ್ತಿತ್ತು.
ಇಂದು ಬೆಳಿಗ್ಗೆ 3.30ರ ಸುಮಾರಿಗೆ ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಲಾರಿಯನ್ನು ತಪಾಸಣೆ ನಡೆಸಿದಾಗ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ಈ ವಾಹನದಲ್ಲಿ ಮೇಲ್ನೋಟಕ್ಕೆ ಪ್ಲೈವುಡ್ ಶೀಟ್ಗಳೇ ಕಾಣುತ್ತಿದ್ದವು. ಪ್ಲೈವುಡ್ ಶೀಟ್ಗಳನ್ನು ಚೌಕಾಕಾರದ ಕೊರೆದು ಬಾವಿ ರೀತಿ ಮಾಡಿ, ಅದರ ಮಧ್ಯದಲ್ಲಿ ಸಾರಾಯಿ ಬಾಕ್ಸ್ ಗಳನ್ನು ಇಟ್ಟು ಸಾಗಿಸಲಾಗುತ್ತಿತ್ತು. ಇದರಲ್ಲಿ ಅತ್ಯಂತ ಬೆಲೆ ಬಾಳುವ ಮದ್ಯದ ಬಾಟಲಿಗಳು ಪತ್ತೆಯಾಗಿವೆ ಎಂದು ಹೇಳಿದರು.
ಇದು ಅಂತಾರಾಜ್ಯ ಪ್ರಕರಣವಾಗಿರುವುದರಿಂದ ಹೆಚ್ಚಿನ ಮಾಹಿತಿ ಬಹಿರಂಗಪಡಿಸಲು ಆಗುವುದಿಲ್ಲ. ಗೋವಾದಿಂದ ಎಲ್ಲಿಗೆ ಇವುಗಳನ್ನು ಸಾಗಿಸಲಾಗುತ್ತಿತ್ತು ಎಂಬ ಬಗ್ಗೆ ಇನ್ನಷ್ಟೇ ತನಿಖೆ ನಡೆಯಬೇಕಿದೆ. ಇಷ್ಟೊಂದು ವ್ಯವಸ್ಥಿತವಾಗಿ ಅಬಕಾರಿ ಅಧಿಕಾರಿಗಳ ಕಣ್ತಪ್ಪಿಸಲು ಮದ್ಯ ಸಾಗಣೆ ಮಾಡಲಾಗುತ್ತಿತ್ತು. ಅಧಿಕಾರಿಗಳ ದಿಕ್ಕು ತಪ್ಪಿಸಲು ಬೇರೆ ಮಾರ್ಗಗಳ ಮೂಲಕ ಮಧ್ಯ ಕರ್ನಾಟಕವನ್ನು ಪ್ರವೇಶಿಸಿತ್ತು. ಆದರೂ ನಮ್ಮ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅಕ್ರಮ ಸಾಗಿಸುವುದನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ : ಲಾರಿಯಲ್ಲಿ ಅಕ್ರಮ ಮದ್ಯ ಸಾಗಾಟ, ಚಾಲಕ ಸೆರೆ; ₹47 ಲಕ್ಷ ಮೌಲ್ಯದ ಮಾಲು ವಶ