ಬೆಳಗಾವಿ: ನಮ್ಮ ಪಕ್ಷದಲ್ಲಿ ಯಾವುದೇ ರೀತಿಯ ಬಣ ರಾಜಕಾರಣಕ್ಕೆ ಅವಕಾಶವಿಲ್ಲ ನಮ್ಮದು ಒಂದೇ ಪಾರ್ಟಿ, ಯಾರು ಬಿಜೆಪಿ ರಾಜಕಾರಣ ಮಾಡ್ತಾರೆ ಅವರಿಗೆ ಭವಿಷ್ಯವಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದರು. ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ, ಇದರಿಂದಾಗಿ ವಿಧಾನಸಭೆ ಚುನಾವಣೆಯಲ್ಲಿ 18ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಹಾಲಿ ಶಾಸಕರಿರುವ ಕ್ಷೇತ್ರದಲ್ಲಿ ಟಿಕೆಟ್ ಫೈಟ್ ವಿಚಾರ ಪ್ರತಿಕ್ರಯಿಸಿ, ಬಿಜೆಪಿ ಟಿಕೆಟ್ ಕೇಳುವುದು ಅಪರಾಧ ಅಲ್ಲ ಸಾಮಾನ್ಯ ಕಾರ್ಯಕರ್ತನಿಗೂ ಟಿಕೆಟ್ ಕೇಳುವ ಅವಕಾಶವಿದೆ, ಪಕ್ಷಕ್ಕೆ ಒಂದು ಚೌಕಟ್ಟಿದೆ. ಆ ಚೌಕಟ್ಟಿನೊಳಗೆ ಪಕ್ಷ ಯಾವ ಸಂದರ್ಭದಲ್ಲಿ ಬಯಸುತ್ತದೆಯೋ ಆಗ ಚರ್ಚೆ ಆಗಲಿದೆ ಟಿಕೆಟ್ ವಿಚಾರ ಬಿಜೆಪಿಯಲ್ಲಿ ಹಾದಿ ಬೀದಿಯಲ್ಲಿ ಚರ್ಚಿಸುವ ವಿಷಯವಲ್ಲ. ಪಕ್ಷದ ಚೌಕಟ್ಟಿನಲ್ಲಿ ಬಗೆಹರಿಸಿಕೊಳ್ಳಬೇಕು, ಅದನ್ನ ಮಾಡ್ತೇವೆ ಯಾರು ಗೆಲ್ಲುತ್ತಾರೆ, ಯಾರಿಗೆ ಹೆಚ್ಚು ಜನಪ್ರಿಯತೆ ಇರುತ್ತದೆ ಎಂಬುದನ್ನು ಆಧರಿಸಿ ಪಕ್ಷ ಟಿಕೆಟ್ ನೀಡುತ್ತದೆ ಎಂದು ಹೇಳಿದರು.
ಪಕ್ಷ ಎರಡು ಮಾನದಂಡ ಇಟ್ಟುಕೊಂಡು ಟಿಕೆಟ್ ಕೊಡುತ್ತದೆ. ಒಂದು ಪಕ್ಷದ ಆಂತರಿಕ ಸರ್ವೇ, ಬಾಹ್ಯ ಸರ್ವೇ. ಆಂತರಿಕ ಅಂದರೆ ಪಕ್ಷದ, ಸಂಘದ ಸರ್ವೇ, ಬಾಹ್ಯ ಅಂದರೆ ಸಾರ್ವಜನಿಕರ ಅಭಿಪ್ರಾಯ. ಇದನ್ನು ಆಧರಿಸಿ ಬಿಜೆಪಿ ಟಿಕೆಟ್ ಕೊಟ್ಟಿರುವಂತದ್ದು, ಇಲ್ಲಿಯೂ ಅದೇ ಮಾನದಂಡ ಅನುಸರಿಸುತ್ತೇವೆ ಎಂದು ಹೇಳಿದರು.
ಹೊಂದಾಣಿಕೆ ರಾಜಕಾರಣ ಬಹಳ ಕಾಲ ನಡೆಯಲ್ಲ: ಬೆಳಗಾವಿ ಸೇರಿ ರಾಜ್ಯದ ಕೆಲವೆಡೆ ಬಿಜೆಪಿಯ ಹೊಂದಾಣಿಕೆ ರಾಜಕಾರಣಕ್ಕೆ ಬ್ರೇಕ್ ಬೀಳುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿ, ಹೊಂದಾಣಿಕೆ ಇರಬೇಕು ಬಿಜೆಪಿ ಕಾರ್ಯಕರ್ತರ ವಿಶ್ವಾಸಕ್ಕೆ ತಗೆದುಕೊಳ್ಳಬೇಕು. ಪರಿವಾರದ ಸಂಘಟನೆಗಳನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಅವರನ್ನ ಒಟ್ಟಿಗೆ ಸೇರಿಸಿ ಅವರ ಸಮನ್ವಯ ಜೊತೆ ವಿಪಕ್ಷಗಳ ಜತೆ ಹೋರಾಟ ಮಾಡಬೇಕು ಹೊಂದಾಣಿಕೆ ವಿಪಕ್ಷಗಳ ಜತೆ ಅಲ್ಲ, ಪಕ್ಷಗಳ ಜೊತೆ ಹೊಂದಾಣಿಕೆ ರಾಜಕಾರಣ ಬಹಳ ಕಾಲ ನಡೆಯಲ್ಲ ಆ ರೀತಿಯ ಹೊಂದಾಣಿಕೆ ರಾಜಕಾರಣ ಪಕ್ಷ ಸಹಿಸೋದು ಇಲ್ಲ ಎಂದರು.
ನಾವು 150ಕ್ಕೂ ಹೆಚ್ಚಿನ ಸ್ಥಾನವನ್ನ ಗೆಲ್ಲುತ್ತೇವೆ:ರಾಜ್ಯದಲ್ಲಿ 150 ಪ್ಲಸ್ ಟಾರ್ಗೆಟ್ ನಮ್ಮದು ಕೇಂದ್ರ ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳು ಪ್ರತಿಕ್ಷೇತ್ರದಲ್ಲಿ ಶೇ 70 ರಿಂದ 80 ರಷ್ಟು ಇದ್ದಾರೆ. ಅವರನ್ನ ಮತದಾರರಾಗಿ ಪರಿವರ್ತಿಸಿದರೆ ಯಾವುದೇ ಕ್ಷೇತ್ರದಲ್ಲಿ ಸೋಲುವ ಪ್ರಶ್ನೆ ಇರುವುದಿಲ್ಲ. ಅವರನ್ನ ಮತದಾರರಾಗಿ ಪರಿವರ್ತನೆ ಮಾಡಿದರೆ ನಾವು 150ಕ್ಕೂ ಹೆಚ್ಚಿನ ಸ್ಥಾನವನ್ನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದಿಂದ 200 ಯ್ಯೂನಿಟ್ ಊಚಿತ ವಿದ್ಯುತ್ ವಿತರಣೆ ಘೋಷಣೆ ವಿಚಾರವಾಗಿ ಪ್ರತಿಕ್ರಿಯಿಸಿ ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಡಿಕೆ ಶಿವಕುಮಾರ್ ಅವಾಗ ಇಂಧನ ಸಚಿವರಾಗಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರಿ ಎಂಬ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ವಿದ್ಯುತ್ ಇಲ್ಲದೆ ಗಿರಿಧರ್ ಪೈ ಎಂಬುವರು ಇಂಧನ ಸಚಿವರಿಗೆ ದೂರವಾಣಿ ಮೂಲಕ ಕರೆ ಮಾಡಿ, ಎಂಥ ಸಾವು ಮಾರಾಯರೇ ನಮ್ಮ ಮೊಬೈಲ್ ಚಾರ್ಜ್ ಮಾಡೋಕು ಕರೆಂಟ್ ಇಲ್ಲ, ನಾವು ಪುತ್ತೂರಿಗೆ ಹೋಗಿ ಮೊಬೈಲ್ ಚಾರ್ಜ್ ಮಾಡಿಕೊಂಡು ಬರುತ್ತಿದ್ದೇವೆ. ಸರ್ಕಾರ ಇದೆಯಾ ಎಂದು ಪ್ರಶ್ನೆ ಮಾಡಿದರು. ಆದರೆ ಜನರಿಗೆ ಸ್ಪಂದಿಸಬೇಕಿದ್ದ ಸರ್ಕಾರ ದೂರವಾಣಿ ಕರೆ ಮಾಡಿರುವವರನ್ನು ಮಧ್ಯರಾತ್ರಿಯಲ್ಲಿ ಬಂಧಿಸಿ ಜೈಲಿಗೆ ಕಳಿಸಿದ್ದರು ಎಂದು ಟೀಕಿಸಿದರು.
ಕಾಂಗ್ರೆಸ್ ಪಕ್ಷದವರಿಗೆ ಸುಳ್ಳು ಹೇಳುವುದು ಅಂದರೆ ಸುಲಭ: ಇಂದು ಉಚಿತವಾಗಿ ವಿದ್ಯುತ್ ನೀಡುತ್ತೇವೆ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಇದ್ದಾಗ ವಿದ್ಯುತ್ ಕೇಳಿದರೆ ಜೈಲು ಗ್ಯಾರಂಟಿ ಎಂಬಂ ಪರಿಸ್ಥಿತಿ ಇತ್ತು ಎಂದು ಕಾಂಗ್ರೆಸ್ ವಿರುದ್ಧ ತೀಕ್ಷ್ಣವಾಗಿ ತಿರುಗೇಟು ನೀಡಿದರು. ಕಾಂಗ್ರೆಸ್ ಪಕ್ಷದವರಿಗೆ ಸುಳ್ಳು ಹೇಳುವುದು ಅಂದರೆ ಸುಲಭ, ರಾಜಸ್ಥಾನದಲ್ಲಿ ಸಾಲ ಮನ್ನಾ ಮಾಡುತ್ತೇನೆ ಎಂದು ಹೇಳಿದರು. ಆದರೆ ನಾಲ್ಕು ವರ್ಷ ಆಯ್ತು ಇನ್ನೂ ಏನು ಆಗಿಲ್ಲ. ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂಬ ಖಾತ್ರಿ ಇದೆ. ಇದರಿಂದ ಅವರು ಸುಳ್ಳು ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಸಿ ಟಿ ರವಿ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಬ್ರಾಹ್ಮಣ ಸಮುದಾಯದ ಒಡೆತನದಲ್ಲಿರುವ ಪತ್ರಿಕೆಗೆ ಜಾಹೀರಾತು ಆದೇಶ ಶುದ್ಧ ಸುಳ್ಳು: ಸಿಟಿ ರವಿ