ಬೆಳಗಾವಿ: ಪಕ್ಕದ ಮಹಾರಾಷ್ಟ್ರ ರಾಜ್ಯದ ಚಂದಗಡ ತಾಲೂಕಿನ ತಿಲಾರಿ ಡ್ಯಾಂನ ಹಿನ್ನೀರಿನಲ್ಲಿ ಮುಳುಗಿ ಬೆಳಗಾವಿ ನಗರದ ಇಬ್ಬರು ಸಹೋದರರು ಮೃತಪಟ್ಟಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ. ಮೃತರು ಕುಂದಾನಗರಿಯ ಕ್ಯಾಂಪ್ ಪ್ರದೇಶದ ರೀಹಾನ್ ಅಲ್ತಾಫ್ ಖಾನ್ (15) ಹಾಗೂ ಮುಸ್ತಫಾ ಅಲ್ತಾಫ್ ಖಾನ್ (12) ಎಂದು ಗುರುತಿಸಲಾಗಿದೆ. ವೀಕೆಂಡ್ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಕುಟುಂಬಸ್ಥರೊಂದಿಗೆ ಅಲ್ತಾಪ್ ಖಾನ್ ಹಾಜಗೋಳಿ ಗ್ರಾಮದ ಬಳಿ ಇರುವ ತಿಲಾರಿ ಡ್ಯಾಮ್ ಕಡೆಗೆ ಪ್ರವಾಸಕ್ಕೆ ತೆರಳಿದ್ದರು. ತಿಲಾರಿ ಡ್ಯಾಮ್ ಹಿನ್ನೀರಿನ ದಡದಲ್ಲಿ ಚಾಳೊಬಾ ದೇವಸ್ಥಾನ ಕೂಡ ಇದೆ.
ಕೈ, ಕಾಲು ತೊಳೆದುಕೊಳ್ಳಲು ಡ್ಯಾಮ್‌ನಲ್ಲಿ ರಿಹಾನ್ ಮತ್ತು ಮುಸ್ತಫಾ ತೆರಳಿದ್ದಾಗ ಕಾಲು ಜಾರಿ ನೀರಿನೊಳಗೆ ಬಿದ್ದಿದ್ದಾರೆ. ನೀರಿನ ಆಳ ಹೆಚ್ಚಿದ್ದರಿಂದ ಸ್ಥಳದಲ್ಲಿದ್ದ ಕುಟುಂಬಸ್ಥರು ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ. ಕಾಪಾಡಿ ಕಾಪಾಡಿ ಎಂದು ಮಕ್ಕಳು ಕೂಗಾಡಿದ್ದಾರೆ. ಕೂಗಾಟ ಕೇಳಿ ಸ್ಥಳೀಯರು ಸ್ಥಳಕ್ಕೆ ಓಡಿ ಬಂದಿದ್ದಾರೆ. ಆದ್ರೂ ಸಹಿತ ಅವರನ್ನು ಕಾಪಾಡಲು ಸಾಧ್ಯವಾಗಿಲ್ಲ.
ಇನ್ನು, ಈ ಸುದ್ದಿ ಪೊಲೀಸ್ ಇಲಾಖೆಗೆ ತಿಳಿದಿದೆ. ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಈಜುಗಾರರೊಂದಿಗೆ ಚಂದಗಡ ಪೊಲೀಸರು ಆಗಮಿಸಿ ಪತ್ತೆ ಕಾರ್ಯ ನಡೆಸಿದರು. ಭಾನುವಾರ ಬೆಳಗ್ಗೆ ಮೃತದೇಹಗಳು ಪತ್ತೆಯಾಗಿವೆ. ಚಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರು ಮಕ್ಕಳನ್ನು ಕಣ್ಮುಂದೆ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಓದಿ: ಮೇಕೆ ಮೇಯಿಸಲು ಬಂದು ಜಲಾಶಯಕ್ಕಿಳಿದ ಬಾಲಕಿ ಸೇರಿ ಮೂವರು ನೀರುಪಾಲು
ಭೀಕರ ರಸ್ತೆ ಅಪಘಾತದಲ್ಲಿ ಸಹೋದರರು ಸಾವು: ಬೈಕ್ ಮತ್ತು ಕಾರು ಮುಖಾಮುಖಿ ಡಿಕ್ಕಿಯಾಗಿ ಸಹೋದರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಉಳವಿ ಗ್ರಾಮದ ಬಳಿ ಕಳೆದ ತಿಂಗಳು ನಡೆದಿತ್ತು. ಮೃತರು ಸುಹೇಲ್ (27) ಹಾಗೂ ಸಯ್ಯದ್ ಆಫ್ರಿದ್ (17) ಎಂದು ಗುರುತಿಸಲಾಗಿತ್ತು.
ಮೃತ ಸಹೋದರರು ಸಾಗರ ಪಟ್ಟಣದ ರಾಮನಗರ ಬಡಾವಣೆಯ ನಿವಾಸಿಗಳಾಗಿದ್ದು, ಉಳವಿ ಗ್ರಾಮದಲ್ಲಿ ನಡೆಯುತ್ತಿದ್ದ ಮದುವೆಗೆಂದು ಹೊರಟಿದ್ದ ವೇಳೆ ಪಲ್ಸರ್ ಬೈಕ್ ಮತ್ತು ವ್ಯಾಗನಾರ್ ಕಾರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಮೃತರಿಬ್ಬರು ಸಾಗರ ಪಟ್ಟಣದಲ್ಲಿ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ. ಅಪಘಾತದಿಂದಾಗಿ ಕೆಲ ಹೊತ್ತು ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು.
ಸುದ್ದಿ ತಿಳಿದಾಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ಕೈಗೊಂಡಿದ್ದರು. ಬಳಿಕ ಮೃತ ದೇಹಗಳನ್ನು ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ಇನ್ನು ಈ ಸುದ್ದಿಯನ್ನು ಪೊಲೀಸರು ಕುಟುಂಬಸ್ಥರಿಗೆ ತಿಳಿಸಿದ್ದರು. ಮಕ್ಕಳ ಸಾವಿನ ಬಗ್ಗೆ ತಿಳಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮರಣೋತ್ತರ ಪರೀಕ್ಷೆ ಬಳಿಕ ಮೃತ ದೇಹಗಳನ್ನು ಪೊಲೀಸರು ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ಮಕ್ಕಳ ಮೃತ ದೇಹಗಳನ್ನು ಪಡೆದ ಕುಟುಂಬ ವಿಧಿ ವಿಧಾನಗಳ ಪ್ರಕಾರ ಅಂತ್ಯಕ್ರಿಯೆ ನಡೆಸಿದರು. ಈ ಘಟನೆ ಕುರಿತು ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.