ಬೆಳಗಾವಿ: ಮಹಾಮಾರಿ ಕೊರೊನಾ ಹೊಡೆತಕ್ಕೆ ಬಡ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿ ತುತ್ತು ಅನ್ನಕ್ಕಾಗಿ ಪರದಾಡುತ್ತಿದ್ದಾರೆ. ಅಂತಹ ನೊಂದ ಕುಟುಂಬಗಳಿಗೆ ರಾಜ್ಯ ಸರ್ಕಾರ ತಕ್ಷಣವೇ ಪರಿಹಾರ ನೀಡುವಂತೆ ಆಗ್ರಹಿಸಿ ಧಾರಾಕಾರ ಸುರಿಯುತ್ತಿರುವ ಮಳೆಯಲ್ಲಿ ಸಿಪಿಐಎಂ ಪಕ್ಷದ ಮಹಿಳೆಯರು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಕೊರೊನಾ ಲಾಕ್ಡೌನ್ ಮಾಡಿದ್ದರಿಂದಾಗಿ ಹಲವು ಕುಂಟುಂಬಗಳು ಬೀದಿಪಾಲಾಗಿವೆ. ಆದರೆ ಸೂಕ್ತ ಪರಿಹಾರ ಹಾಗೂ ಜನರಿಗೆ ಸ್ಪಂದಿಸಬೇಕಾದ ಸರ್ಕಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಜನರತ್ತ ತಿರುಗಿ ನೋಡುತ್ತಿಲ್ಲ ಎಂದು ಆರೋಪಿಸಿ ಮಳೆಗೂ ಅಂಜದೇ ಪ್ರತಿಭಟನೆ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಇದಲ್ಲದೇ ಲಾಕ್‍ಡೌನ್‍ನಿಂದ ಸಂಕಷ್ಟ ಅನುಭವಿಸುತ್ತಿರುವ ಬಡವರು, ನಿರುದ್ಯೋಗಿ ಯುವಕರು, ಕಾರ್ಮಿಕರಿಗೆ ಸರ್ಕಾರ ತಕ್ಷಣ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಆದಾಯ ತೆರಿಗೆ ತುಂಬುವವರನ್ನು ಬಿಟ್ಟು ಇನ್ನುಳಿದ ಎಲ್ಲ ಕುಟುಂಬಗಳಿಗೆ ಪ್ರತಿ ತಿಂಗಳಿಗೆ 7,500 ರೂ. ಗಳ ಪರಿಹಾರಧನವನ್ನು ಮುಂಬರುವ 6 ತಿಂಗಳವರೆಗೆ ವಿತರಿಸಬೇಕು ಎಂದು ಆಗ್ರಹಿಸಿದರು.
ಇದಲ್ಲದೆ ತಿಂಗಳಿಗೆ 10 ಕೆ.ಜಿ ಅಕ್ಕಿಯನ್ನು ಕುಟುಂಬದ ಪ್ರತಿಯೊಬ್ಬರಿಗೂ 6 ತಿಂಗಳವರೆಗೆ ವಿತರಣೆ ಮಾಡಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ದುಡಿಯುತ್ತಿರುವ ಕೂಲಿ ಕಾರ್ಮಿಕರಿಗೆ ಗೌರವಧನ 600 ರೂ, ವರೆಗೆ ಹೆಚ್ಚಿಸಬೇಕು. ವರ್ಷದಲ್ಲಿ ಕನಿಷ್ಟ ಪಕ್ಷ 200 ದಿನಗಳವರೆಗೆ ನರೇಗಾ ಕಾರ್ಮಿಕರಿಗೆ ಉದ್ಯೋಗ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.