ಅಥಣಿ (ಬೆಳಗಾವಿ): ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಪಟ್ಟಣದಲ್ಲೇ ಕೋವಿಡ್ ಆಸ್ಪತ್ರೆ ಸಿದ್ಧಪಡಿಸಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಕಳೆದ ಎರಡು ವಾರಗಳಿಂದ ತಾಲೂಕಿನಾದ್ಯಂತ ಕೊವಿಡ್-19 ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಹಾಗೂ ಕೋವಿಡ್ ಆಸ್ಪತ್ರೆ ನಿರ್ಮಾಣಕ್ಕೆ ಬೇಡಿಕೆ ಹೆಚ್ಚಿದ ಹಿನ್ನೆಲೆ ತಾಲೂಕಿನ ಹೊರವಲಯದ ಚಮಕೇರಿ ಮಡ್ಡಿಯ ರಾಣಿ ಚೆನ್ನಮ್ಮ ವಸತಿ ನಿಲಯದಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಈ ಬಗ್ಗೆ ತಾಲೂಕು ವೈದ್ಯಾಧಿಕಾರಿ ಮುತ್ತಣ್ಣ ಕೊಪ್ಪದ್ 'ಈಟಿವಿ ಭಾರತ' ಜೊತೆ ದೂರವಾಣಿ ಮೂಲಕ ಮಾತನಾಡಿ, ಪಟ್ಟಣದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಬೆಳಗಾವಿ ಜಿಲ್ಲೆಯ ಕೋವಿಡ್ ಆಸ್ಪತ್ರೆ ದೂರವಾಗುವುದರಿಂದ ಸರ್ಕಾರದ ನಿರ್ದೇಶನದಂತೆ, ತಾಲೂಕಿನ ಹೊರವಲಯದ ಚಮಕೇರಿ ಮಡ್ಡಿಯ ವಸತಿ ಶಾಲೆಯನ್ನೇ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಿ, ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದೇವೆ ಎಂದರು.
ಅದರಲ್ಲೂ ಹೆಚ್ಚಿನ ಸೋಂಕು ಲಕ್ಷಣ ಕಂಡುಬಂದಂತವರಿಗೆ ಅಥಣಿ ಕೋವಿಡ್ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರಿಸಿದ್ದೇವೆ. 30 ಹಾಸಿಗೆಯನ್ನು ಒಳಗೊಂಡ ಆಸ್ಪತ್ರೆಯನ್ನು ತಾಲೂಕು ಮಟ್ಟದಲ್ಲಿ ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.