ಬೆಳಗಾವಿ: ಮಹಾಮಾರಿ ಕೊರೊನಾ ಗಡಿ ಜಿಲ್ಲೆ ಬೆಳಗಾವಿಯನ್ನು ವ್ಯಾಪಕವಾಗಿ ಆವರಿಸುತ್ತಿದೆ. ಮೂರು ರಾಜ್ಯಗಳ ಸಂಪರ್ಕ ಕೊಂಡಿಯಾಗಿರುವ ಬೆಳಗಾವಿಯಲ್ಲಿ ಮನೆಗಳ್ಳತನ, ಡಕಾಯಿತಿ ಪ್ರಕರಣಗಳು ಎಗ್ಗಿಲ್ಲದೆ ನಡೆಯುತ್ತವೆ. ಆದರೆ ಕೊರೊನಾ ಎರಡನೇ ಅಲೆಗೆ ಬೆದರಿರುವ ಕಳ್ಳರು ಕಳೆದ ಎರಡ್ಮೂರು ತಿಂಗಳಿಂದ ಸೈಲೆಂಟ್ ಆಗಿದ್ದಾರೆ.
ನಗರದ ಗಲ್ಲಿ ಗಲ್ಲಿಗೂ ಕೊರೊನಾ ವ್ಯಾಪಾಸಿದೆ. ಒಂದೇ ಮನೆಯಲ್ಲಿ ಹಲವರಿಗೆ ಸೋಂಕು ಹರಡುತ್ತಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಹೌಸ್‍ಫುಲ್ ಆಗಿವೆ. ಅನೇಕರು ಕುಟುಂಬ ಸಮೇತ ಆಸ್ಪತ್ರೆಗೆ ದಾಖಲಾಗಿರುವ ಉದಾಹರಣೆಗಳು ಇವೆ. ಮನೆಯಲ್ಲಿ ಯಾರೂ ಇರದಿದ್ದರೂ ಕೈಚಳಕ ತೋರಿಸಬೇಕಿದ್ದ ಕಳ್ಳರು ಮಾತ್ರ ಫುಲ್ ಸೈಲೆಂಟ್ ಆಗಿದ್ದಾರೆ. ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ನಗರದಲ್ಲಿ ಒಂದೇ ಒಂದು ಮನೆಗಳ್ಳತನ, ಡಕಾಯಿತಿ ಪ್ರಕರಣಗಳು ನಡೆದಿಲ್ಲ ಎಂದು ಡಿಸಿಪಿ ವಿಕ್ರಂ ಆಮಟೆ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಅಂತಾರಾಜ್ಯ ಕಳ್ಳರು ಥಂಡಾ:
ನೆರೆಯ ಗೋವಾ ಇಲ್ಲವೇ ಮಹಾರಾಷ್ಟ್ರ ಮಾರ್ಗವಾಗಿ ಅಂತಾರಾಜ್ಯ ಕಳ್ಳರು ನಗರ ಪ್ರವೇಶಿಸುತ್ತಿದ್ದರು. ಇದೀಗ ಕರ್ನಾಟಕ ಸೇರಿ ನೆರೆಯ ಗೋವಾ ಹಾಗೂ ಮಹಾರಾಷ್ಟ್ರದಲ್ಲಿ ಲಾಕ್‍ಡೌನ್ ಘೋಷಣೆಯಾಗಿದೆ. ಖಾಸಗಿ ವಾಹನಗಳ ಅನಗತ್ಯ ಓಡಾಟಕ್ಕೆ ಪೊಲೀಸರು ಬ್ರೇಕ್ ಹಾಕಿದ್ದಾರೆ. ಅಗತ್ಯ ಸೇವೆಗಳ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶವಿದ್ದು, ಭಯದಿಂದಲೇ ಕಳ್ಳರು ಥಂಡಾ ಹೊಡೆದಿದ್ದಾರೆ.
ರಾಜ್ಯ ಪ್ರವೇಶಿಸುವ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಚೆಕ್ ಪೋಸ್ಟ್ ನಿರ್ಮಿಸಿದ್ದು, ನಗರ ಪ್ರವೇಶಿಸುವ ಪ್ರಯಾಣಿಕರಿಗೆ ಕೊರೊನಾ ನೆಗಟಿವ್ ವರದಿ ಕಡ್ಡಾಯಗೊಳಿಸಲಾಗಿದೆ. ವೈದ್ಯಕೀಯ ಸೇವೆ ಹೊರತುಪಡಿಸಿ ಉಳಿದ ವಾಹನಗಳನ್ನು ರಾಜ್ಯ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ. ಈ ಸಂಗತಿ ಕಳ್ಳರನ್ನು ಕಟ್ಟಿಹಾಕಲು ಮುಖ್ಯ ಕಾರಣ ಎನ್ನಲಾಗುತ್ತಿದೆ.
ಜಿಲ್ಲೆ ಪ್ರವೇಶಿಸುವ ವಾಹನಗಳ ಮೇಲೆ ಹದ್ದಿನ ಕಣ್ಣು:
ಗೋವಾ ಹಾಗೂ ಮಹಾರಾಷ್ಟ್ರದಿಂದ ರಾಜ್ಯವನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿ ಜಿಲ್ಲಾಡಳಿತ ಚೆಕ್ ಪೋಸ್ಟ್ ನಿರ್ಮಿಸಿದೆ. ನಿರಂತರವಾಗಿ ಚೆಕ್ ಪೋಸ್ಟ್ಗೆ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತಿದೆ. ಬೆಳಗಾವಿ ಜಿಲ್ಲೆಗೆ ಪ್ರವೇಶಿಸುವ ಪ್ರತಿ ವಾಹನಗಳ ಮಾಹಿತಿ ಸಂಗ್ರಹಿಸುತ್ತಿರುವ ಪೊಲೀಸರು, ಅಂತಹ ವಾಹನಗಳ ಮೇಲೂ ಹದ್ದಿನ ಕಣ್ಣು ಇಟ್ಟಿದ್ದಾರೆ. ಇನ್ನು ನಗರದಲ್ಲಿ ಕೂಡ ಕೇವಲ ಒಂದೇ ಪ್ರಮುಖ ರಸ್ತೆ ಆರಂಭವಿದ್ದು, ಉಳಿದ ರಸ್ತೆಗಳನ್ನು ಬ್ಯಾರಿಕೇಡ್‍ನಿಂದ ಬಂದ್ ಮಾಡಲಾಗಿದೆ.
ನಗರದಲ್ಲಿ ಹಾಯಾಗಿ ಓಡಾಡಿ, ಹೊಂಚು ಹಾಕಲು ಕಳ್ಳರಿಗೆ ಸಾಧ್ಯವಾಗುತ್ತಿಲ್ಲ. ಅಂತಾರಾಜ್ಯ ಕಳ್ಳರು ತಮ್ಮ ಕೃತ್ಯ ಮುಗಿಸಿ ಕ್ಷಣಾರ್ಧದಲ್ಲೇ ಗೋವಾ ಇಲ್ಲವೇ ಮಹಾರಾಷ್ಟ್ರ, ಇಲ್ಲವೇ ಹುಬ್ಬಳ್ಳಿ, ಬೆಂಗಳೂರಿನತ್ತ ಪ್ರಯಾಣ ಬೆಳೆಸುತ್ತಿದ್ದರು. ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರದ ಮೂರು ರಾಜ್ಯಗಳಲ್ಲಿ ಲಾಕ್‍ಡೌನ್ ಜಾರಿಯಲ್ಲಿದೆ. ಮತ್ತೊಂದೆಡೆ ಖಾಸಗಿ ಹಾಗೂ ಸರ್ಕಾರಿ ಸಾರಿಗೆ ಸೇವೆಯೂ ಸ್ತಬ್ಧವಾಗಿದೆ. ಹೀಗಾಗಿ ಕಳ್ಳರಿಗೆ ಪ್ರಯಾಣ ಸಾಧ್ಯವಾಗದೇ ಸೈಲೆಂಟ್ ಆಗಿದ್ದಾರೆ.
ಮೊದಲನೇ ಅಲೆಯಲ್ಲಿ ಕಳ್ಳರ ಅಟ್ಟಹಾಸ:
2020ರಲ್ಲಿ ಕೇಂದ್ರ ಸರ್ಕಾರ ಕೊರೊನಾ ನಿಯಂತ್ರಿಸಲು ಲಾಕ್‍ಡೌನ್ ಘೋಷಣೆ ಮಾಡಿತ್ತು. ಆ ಸಮಯ ಹೊರತುಪಡಿಸಿದ್ರೆ ಜನವರಿಯಿಂದ ಮಾರ್ಚ್ ಹಾಗೂ ಜೂನ್‍ನಿಂದ ಡಿಸೆಂಬರ್ವರೆಗೆ ಕಳ್ಳರು ನಗರದಲ್ಲಿ ಅಟ್ಟಹಾಸ ಮೆರೆದಿದ್ದರು. ಕಳೆದ ವರ್ಷ ನಗರದಲ್ಲಿ 275 ಕಳ್ಳತನ ನಡೆದಿದ್ದು, ಇದರಲ್ಲಿ ಪೊಲೀಸರು ಪತ್ತೆ ಹಚ್ಚಿದ್ದು ಕೇವಲ 84 ಪ್ರಕರಣಗಳನ್ನು ಮಾತ್ರ. ಮನೆಗಳ್ಳತನ, ಸರಗಳ್ಳತನ, ಬೈಕ್ ಹಾಗೂ ವಾಹನ ಕಳ್ಳತನ ಸೇರಿ ಕಳೆದ ವರ್ಷ 5.88 ಕೋಟಿ ರೂ. ಮೌಲ್ಯದ ವಸ್ತುಗಳು ಕಳ್ಳತನವಾಗಿದ್ದವು. ಮೊದಲನೇ ಅಲೆಯಲ್ಲಿ ವಾಹನಗಳ ಸಂಚಾರ ಇತ್ತು. ಅಲ್ಲದೇ ದೇಶಾದ್ಯಂತ ಏಕಕಾಲಕ್ಕೆ ಅನ್‍ಲಾಕ್ ಮಾಡಲಾಗಿತ್ತು. ಇದೀಗ ಆಯಾ ರಾಜ್ಯಗಳು ಲಾಕ್‍ಡೌನ್ ಘೋಷಿಸಿದ್ದು, ಕಳ್ಳರ ಕೃತ್ಯಕ್ಕೆ ಸದ್ಯ ಬ್ರೇಕ್ ಬಿದ್ದಂತಾಗಿದೆ.
ಓದಿ: ಚಾಮರಾಜನಗರ: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ... ಕಾರಣ ನಿಗೂಢ!