ಬೆಳಗಾವಿ: ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿದ್ದ ಕೋವ್ಯಾಕ್ಸಿನ್ ಲಸಿಕೆಯ 3 ಹಂತದ ಕ್ಲಿನಿಕಲ್ ಟ್ರಯಲ್ ನಡೆಸಿದ್ದ ಇಲ್ಲಿನ ಜೀವನ ರೇಖಾ ಆಸ್ಪತ್ರೆ ಇದೀಗ ಮಕ್ಕಳಿಗಾಗಿ ಶೋಧಿಸಿರುವ ಕೋವಿಡ್ ಲಸಿಕೆಯ ಯಶಸ್ವಿ ಕ್ಲಿನಿಕಲ್ ಟ್ರಯಲ್ ನಡೆಸಿದೆ.
ಗುಜರಾತಿನ ಅಹ್ಮದಾಬಾದ್ ಮೂಲದ ಜೈಡಸ್ ಕ್ಯಾಡಿಲಾ ಕಂಪನಿ ಅಭಿವೃದ್ಧಿಪಡಿಸಿರುವ ಝೈಕೋವ ಡಿ ಲಸಿಕೆ ಕ್ಲಿನಿಕಲ್ ಟ್ರಯಲ್ ಯಶಸ್ವಿಯಾಗಿ ನಡೆಸಿದೆ. ಬೆಳಗಾವಿಯ 20 ಮಕ್ಕಳ ಮೇಲೆ ಝೈಕೋವ ಡಿ ಲಸಿಕೆಯ ಕ್ಲಿನಿಕಲ್ ಟ್ರಯಲ್ ಮಾಡಿದ್ದೇವೆ ಎಂದು ಆಸ್ಪತ್ರೆಯ ಮುಖ್ಯಸ್ಥ ಡಾ. ಅಮಿತ್ ಭಾತೆ ಮಾಹಿತಿ ನೀಡಿದ್ದಾರೆ.
ಈಗಾಗಲೇ 20 ಮಕ್ಕಳ ಮೇಲೆ 3 ಡೋಸ್ ಲಸಿಕೆಯ ಕ್ಲಿನಿಕಲ್ ಟ್ರಯಲ್ ಯಶಸ್ವಿಯಾಗಿದೆ. ಮೊದಲ ಲಸಿಕೆ ಪಡೆದ 28 ದಿನಕ್ಕೆ 2ನೇ ಡೋಸ್, 56ನೇ ದಿನಕ್ಕೆ 3ನೇ ಡೋಸ್ ನೀಡಿದ್ದೇವೆ. ಯಾವ ಮಕ್ಕಳ ಮೇಲೂ ಸಹ ಅಡ್ಡ ಪರಿಣಾಮ ಬೀರಿಲ್ಲ. ಕಾಲಕಾಲಕ್ಕೆ ರಕ್ತದ ಮಾದರಿ ಪಡೆದು ರೋಗನಿರೋಧಕ ಶಕ್ತಿ ಪರೀಕ್ಷಿಸಲಾಗಿದೆ. 12 ತಿಂಗಳ ಕಾಲ ಮಕ್ಕಳ ಮೇಲೆ ನಿಗಾ ಇಡಲಾಗುತ್ತದೆ. ಕೋವ್ಯಾಕ್ಸಿನ್, ಕೋವಿಶೀಲ್ಡ್ ಲಸಿಕೆಯನ್ನು ಇಂಟ್ರಾ ಮಸ್ಕ್ಯೂಲರ್ಗೆ ಕೊಡಲಾಗುತ್ತೆ. ಆದರೆ ಝೈಕೋವ ಡಿ ಲಸಿಕೆಯನ್ನು ಇಂಟ್ರಾ ಡರ್ಮಲ್ ರೂಟ್‌ನಲ್ಲಿ ನೀಡಲಾಗಿದೆ ಎಂದರು.
ಭಾರತ್ ಬಯೋಟೆಕ್ ಸಂಸ್ಥೆ ಕೂಡ ಮಕ್ಕಳಿಗೆ ಲಸಿಕೆ ಶೋಧಿಸಿದೆ. ಎರಡರಿಂದ 18 ವರ್ಷಗಳವರೆಗಿನ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ದೊರೆಯಲಿದೆ. ಮಕ್ಕಳಿಗಾಗಿ ಶೋಧಿಸಿರುವ ಕೋವ್ಯಾಕ್ಸಿನ್ ಲಸಿಕೆಯ ಕ್ಲಿನಿಕಲ್ ಟ್ರಯಲ್ ಬೆಳಗಾವಿಯ ಜೀವನ ರೇಖಾ ಆಸ್ಪತ್ರೆಯಲ್ಲಿ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಓದಿ: ಪ್ರಧಾನಿ ಎಲ್ಲ ರಾಜ್ಯಗಳಿಗೂ ತಾರತಮ್ಯ ಮಾಡದೇ ಸೂಕ್ತ ವ್ಯವಸ್ಥೆ ಮಾಡಿದ್ದಾರೆ: ಅಶೋಕ್