ಬೆಳಗಾವಿ: ಜಿಲ್ಲೆಯಲ್ಲಿ ಕೋವ್ಯಾಕ್ಸಿನ್ ಲಸಿಕೆ ಖಾಲಿ ಆಗಿದ್ದು, ಸದ್ಯಕ್ಕೆ 'ಕೋವ್ಯಾಕ್ಸಿನ್ ಔಟ್ ಆಫ್ ಸ್ಟಾಕ್' ಎಂದು ಬಿಮ್ಸ್ ಆಡಳಿತ ಮಂಡಳಿ ಲಸಿಕಾ ಕೇಂದ್ರದ ಹೊರಗಡೆ ಸೂಚನಾ ಪತ್ರ ಅಂಟಿಸಿದೆ. ದೂರದ ಊರುಗಳಿಂದ ಲಸಿಕೆ ಪಡೆಯಲು ಬಂದವರು ಸರ್ಕಾರಕ್ಕೆ ಹಿಡಿಶಾಪ ಹಾಕಿ ವಾಪಸ್ ತೆರಳುತ್ತಿದ್ದಾರೆ.
ಕಳೆದ ಹಲವು ದಿನಗಳಿಂದ ಜಿಲ್ಲೆಯಲ್ಲಿ ಕೋವ್ಯಾಕ್ಸಿನ್ ಲಸಿಕೆಗಳ ಕೊರತೆ ಆಗಿದ್ದು, ಎರಡನೇ ಡೋಸ್ ಪಡೆಯಲು ಬಂದವರು ಲಸಿಕೆ ಸಿಗದೆ ವಾಪಸ್ ತೆರಳುತ್ತಿದ್ದಾರೆ. ಈ ವೇಳೆ ಫ್ರಂಟ್ಲೈನ್ ವರ್ಕರ್ ಆಗಿರುವ ಶಿಕ್ಷಕಿ ಪೂರ್ಣಿಮಾ ಎಂಬುವರಿಗೆ ಕೋವ್ಯಾಕ್ಸಿನ್ ಎರಡನೇ ಡೋಸ್ ಇಲ್ಲದೆ ಪರದಾಡಿದರು.
ಕಳೆದ 40 ದಿನಗಳ ಹಿಂದೆ ಕೋವ್ಯಾಕ್ಸಿನ್ ಮೊದಲ ಡೋಸ್ ಪಡೆದಿದ್ದ ಪೂರ್ಣಿಮಾ, ಎರಡನೇ ಡೋಸ್ ಕೊರತೆ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ, ಕಳೆದ ಒಂದು ವಾರದಿಂದ ಬರುತ್ತಿದ್ದೇವೆ. ಆದರೆ, ಕೋವ್ಯಾಕ್ಸಿನ್ ಇಲ್ಲ ಅಂತಾ ವಾಪಸ್ ಕಳಿಸುತ್ತಿದ್ದಾರೆ. ಲಾಕ್‌ಡೌನ್ ಟೈಂನಲ್ಲಿ ದಿನವೂ ಪೊಲೀಸರಲ್ಲಿ ಮನವಿ ಮಾಡಿ ಬರೋದು ಕಷ್ಟ ಆಗ್ತಿದೆ ಎಂದು ಗೋಳು ತೋಡಿಕೊಂಡರು.
![covaxin-vaccine-not-available-in-belagavi-bims](https://etvbharatimages.akamaized.net/etvbharat/prod-images/kn-bgm-01-13-covid-lasike-yadavttu-ka10029_13052021113711_1305f_1620886031_882.jpg)
ಇದನ್ನೂ ಓದಿ: ಕೋವಿಡ್ ಲಸಿಕೆ ಕೊರತೆ: ಆಸ್ಪತ್ರೆಗೆ ಅಲೆದಾಡಿ ಸುಸ್ತಾದ ಸಿಲಿಕಾನ್ ಸಿಟಿ ಮಂದಿ
ಸದ್ಯ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 19,290 ಲಸಿಕೆಗಳ ಸಂಗ್ರಹವಿದ್ದು, 1690 ಕೋವ್ಯಾಕ್ಸಿನ್, 17,600 ಕೋವಿಶಿಲ್ಡ್ ಲಸಿಕೆಗಳಿವೆ. ಆದರೂ ಬೀಮ್ಸ್ ಸಿಬ್ಬಂದಿ ಕೋವ್ಯಾಕ್ಸಿನ್ ಲಸಿಕೆ ನೋ ಸ್ಟಾಕ್ ಹಾಕಿದ್ದು, ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.