ಬೆಳಗಾವಿ: ಕೆಪಿಟಿಸಿಎಲ್ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದಲ್ಲಿ ಬಂಧಿತರಾಗಿರುವ ಐವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಅಲ್ಲದೇ, ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಬೆಳಗಾವಿ ಜಿಲ್ಲಾ ಪೊಲೀಸರು ಬಂಧಿಸಿದ್ದು, ಈ ಸಂಖ್ಯೆ 14ಕ್ಕೇರಿದೆ.
ಗೋಕಾಕ ತಾಲೂಕು ನಾಗನೂರು ಗ್ರಾಮದ ಸಿದ್ಧಪ್ಪ ಮದಿಹಳ್ಳಿ, ಮಾಲದಿನ್ನಿಯ ಸುನೀಲ್ ಭಂಗಿ, ರೇಣುಕಾ ಜವಾರಿ, ವೀರನಗದ್ದಿ ಗ್ರಾಮದ ಸಂತೋಷ್ ಮಾನಗಾಂವಿ, ಬೈಲಹೊಂಗಲ ತಾಲೂಕಿನ ಬೆನಚಿನಮರಡಿ ಗ್ರಾಮದ ಸಿದ್ದಪ್ಪ ಕೊತ್ತಲ ಸಲ್ಲಿಸಿದ್ದ ಜಾಮೀನು ಅರ್ಜಿಗಳ ವಿಚಾರಣೆ ನಡೆಸಿದ ಗೋಕಾಕ್‌ನ 12ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಎಲ್ಲ ಅರ್ಜಿಗಳನ್ನು ತಿರಸ್ಕರಿಸಿತು.
ಕೆಪಿಟಿಸಿಎಲ್ ನೇಮಕಾತಿ ಪರೀಕ್ಷೆಯಲ್ಲಿ ಸ್ಮಾರ್ಟ್ ವಾಚ್ ಬಳಸಿ ನಕಲಿಗೆ ಪ್ರಯತ್ನಿಸಿದ್ದ ಸಿದ್ದಪ್ಪ ಮದಿಹಳ್ಳಿ ಸೇರಿದಂತೆ 9 ಆರೋಪಿಗಳನ್ನು ಆ.22 ರಂದು ಬೆಳಗಾವಿ ಜಿಲ್ಲಾ ಪೊಲೀಸರು ಬಂಧಿಸಿದ್ದರು. ಆ ಪೈಕಿ ಐವರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಈವರೆಗೆ ತಲೆಮರೆಸಿಕೊಂಡು ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದ ಪ್ರಮುಖ ಆರೋಪಿ ಬೆಳಗಾವಿಯ ಸಂಜೀವ ಭಂಡಾರಿಯ ಜಾಮೀನು ಅರ್ಜಿಯನ್ನೂ ನ್ಯಾಯಾಲಯ ತಿರಸ್ಕರಿಸಿತು. ಆರೋಪಿ ಸಂಜೀವ ಭಂಡಾರಿಯನ್ನು ಸೆ.2ರಂದು ಪೊಲೀಸರು ಬಂಧಿಸಿದ್ದಾರೆ.
ಮತ್ತೊಬ್ಬ ಆರೋಪಿ ಬಂಧನ: ಕೆಪಿಟಿಸಿಎಲ್ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಬೆಳಗಾವಿ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಗೋಕಾಕ್ ತಾಲೂಕಿನ ಅರಬಾವಿ ಪಟ್ಟಣದ ಗಿರೀಶ್ ಫಕೀರಪ್ಪ ಬನಾಜ್ (22) ಬಂಧಿತ ಆರೋಪಿ. ಈ ಮೂಲಕ ಬಂಧಿತರ ಸಂಖ್ಯೆ 14ಕ್ಕೇರಿದಂತಾಗಿದೆ.
ಹುಕ್ಕೇರಿ ಸಹಾಯಕ ಲೈನ್‌ಮನ್ ಆಗಿ ಕೆಲಸ ಮಾಡುತ್ತಿದ್ದ ಗಿರೀಶ್ ಬನಾಜ್, ಕೆಪಿಟಿಸಿಎಲ್ ನೇಮಕಾತಿ ಪರೀಕ್ಷೆ ವೇಳೆ ಪ್ರಶ್ನೆಗಳಿಗೆ ಉತ್ತರ ಹುಡುಕಿ ಅಭ್ಯರ್ಥಿಗಳಿಗೆ ನೀಡಲು ಸಹಾಯ ಮಾಡಿರುವುದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ. ತಾಲೂಕಿನ ಶಿರಹಟ್ಟಿ ಬಿ.ಕೆ.ಗ್ರಾಮದ ಮನೆಯಲ್ಲಿ ಸ್ಮಾರ್ಟ್ ವಾಚ್ ಮೂಲಕ ಪಡೆದ ಪ್ರಶ್ನೆಗಳಿಗೆ ಉತ್ತರ ತಯಾರಿಸುತ್ತಿದ್ದ ತಂಡದಲ್ಲಿ ಗಿರೀಶ್ ಒಬ್ಬನಾಗಿದ್ದನು.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಗಿರೀಶ್ ತಲೆಮರೆಸಿಕೊಂಡಿದ್ದ. ಎಸ್ಪಿ ಡಾ.ಸಂಜೀವ್ ಪಾಟೀಲ್ ಮಾರ್ಗದರ್ಶನದಲ್ಲಿ ಜಿಲ್ಲಾ ಪೊಲೀಸರು ಮೂರು ತಂಡ ರಚಿಸಿ ಕಾರ್ಯಾಚರಣೆ ನಡೆಸಿದ್ದರು. ಸದ್ಯ ಗಿರೀಶ್ ಬನಾಜ್ ತನಿಖಾ ತಂಡದ ಬಲೆಗೆ ಬಿದ್ದಿದ್ದಾನೆ.
ಓದಿ: 16 ವರ್ಷವಾದ್ರೂ ಮೇಲ್ಚಾಟ್ ಸೇವೆಗೆ ಸಿಗದ ಅವಕಾಶ.. ಟಿಟಿಡಿ ವಿರುದ್ಧ ಗ್ರಾಹಕ ಸೇವಾ ಕೋರ್ಟ್ ಬೇಸರ