ಚಿಕ್ಕೋಡಿ: ಕೃಷಿಯಲ್ಲಿ ಲಾಭವಿಲ್ಲ ಎಂದು ಹೊಲಗದ್ದೆ ಮಾರಿ ಪಟ್ಟಣ - ನಗರ ಪ್ರದೇಶ ಸೇರುವವರ ನಡುವೆ ಇಲ್ಲೊಬ್ಬ ರೈತ ದಂಪತಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ನೋಡಿ, ಬರಡು ಭೂಮಿಯಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆದು ಕೈತುಂಬಾ ಆದಾಯ ಪಡೆದುಕೊಂಡು ಉಳಿದ ರೈತರಿಗೆ ಮಾದರಿಯಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಆಜೂರ್ ಗ್ರಾಮದ ರಾವಸಾಬ್ ಅಪ್ಪಾಸಾಬ ಐಗಳಿ ಎಂಬುವರು ತಮ್ಮ ನಾಲ್ಕು ಎಕರೆ ಪ್ರದೇಶದಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆದು ವರ್ಷಕ್ಕೆ 24 ಲಕ್ಷ ಆದಾಯವನ್ನು ಪಡೆದುಕೊಂಡು ಕೃಷಿಯಲ್ಲಿ ಲಾಭದಾಯಕ ಬೆಳೆಯನ್ನು ಬೆಳೆಯುತ್ತಿದ್ದಾರೆ. ಮೊದಲನೇ ವರ್ಷದಲ್ಲಿ ಒಂದು ಎಕರೆ ಬೆಳೆದು ಹಂತಹಂತವಾಗಿ ಮೂರು ಎಕರೆಯಲ್ಲಿ ವಿಸ್ತರಣೆ ಮಾಡಿಕೊಂಡು, ಒಟ್ಟು ನಾಲ್ಕು ಎಕರೆಯಲ್ಲಿ ಆರು ಸಾವಿರ ಸಸಿಗಳನ್ನು ನಾಟಿ ಮಾಡಿ, ಕೈತುಂಬಾ ಆದಾಯ ಪಡೆಯುತ್ತಿದ್ದಾರೆ.
ವಿವಿಧ ನಗರಗಳಿಗೆ ಹಣ್ಣುಗಳ ರವಾನೆ: ಫಸಲನ್ನು ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ, ಕೊಲ್ಲಾಪುರ ಮತ್ತು ಹೈದರಾಬಾದ್, ವಿಜಯಪುರ, ಬೆಂಗಳೂರು, ಮಂಗಳೂರು, ನಗರಗಳಿಗೆ ಸರಬರಾಜು ಮಾಡುತ್ತಾರೆ. ಒಂದು ಕೆಜಿಗೆ 70ರೂ ದಿಂದ 200 ರೂಪಾಯಿವರೆಗೆ ಮಾರಾಟವಾಗುತ್ತದೆ. ''ಒಂದು ಎಕರೆಗೆ ಆರು ಲಕ್ಷದಿಂದ ಎಂಟು ಲಕ್ಷ ರೂಪಾಯಿವರೆಗೆ ಆದಾಯ ಬರುತ್ತದೆ. ಇದಕ್ಕೆ ರೋಗಬಾಧೆ ಹಾಗೂ ಖರ್ಚು ಕಡಿಮೆ ಇರುವುದರಿಂದ ಆದಾಯ ಲಾಭದಾಯಕವಾಗಿದೆ. ಈ ಬೆಳೆ ಬೆಳೆದು ನಾವು ಖುಷಿಯಾಗಿದ್ದೇವೆ'' ಎಂದು ರೈತ ರಾವಸಾಬ್ ಅಪ್ಪಾಸಾಬ ಐಗಳಿ ಸಂತಸ ವ್ಯಕ್ತಪಡಿಸಿದ್ದಾರೆ.
ಬರಡು ಭೂಮಿಯಲ್ಲಿ ಬಂಗಾರ ಬೆಳೆ: ರೈತ ಮಹಿಳೆ ಲತಾ ರಾವಸಾಬ್ ಐಗಳಿ ಮಾತನಾಡಿ, ’’ಮೊದಲಿಗೆ ನಮಗೆ ಇಲ್ಲಿ ಕುಡಿಯುವುದಕ್ಕೆ ನೀರು ಇರಲಿಲ್ಲ, ಸಂಪೂರ್ಣವಾಗಿ ಬರಡು ಭೂಮಿಯಲ್ಲಿ ಸ್ವಲ್ಪ ಪ್ರಮಾಣದ ನೀರಿನಲ್ಲಿ ಬೆಳೆಯಬಹುದಾದ ಈ ಬೆಳೆಯನ್ನು ಬೆಳೆಯಲು ಪ್ರಾರಂಭಿಸಿ, ಸದ್ಯ ಲಕ್ಷಾಂತರ ರೂಪಾಯಿ ಆದಾಯವನ್ನು ಪಡೆದುಕೊಳುತ್ತೇವೆ. ಈ ಬೆಳೆಯಲ್ಲಿ ಖರ್ಚು ಕಡಿಮೆ ಇದೆ. ಇನ್ನು ನಾವು ಸಾವಯುವ ಕೃಷಿ ಪದ್ಧತಿ ಅಳವಡಿಸಿಕೊಂಡು ಈ ಡ್ರ್ಯಾಗನ್ ಫ್ರೂಟ್ ಬೆಳೆಯುತ್ತಿದ್ದೇವೆ. ಇದರಲ್ಲಿ ಹಲವು ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ‘‘ ಎಂದು ಹೇಳಿದರು.
’‘ಸದ್ಯ ನಾವು ನಮ್ಮ ತೋಟದಲ್ಲಿ ಐದು ಬಗೆಯ ಹಣ್ಣುಗಳನ್ನು ಬೆಳೆಯುತ್ತಿದ್ದೇವೆ. ರೆಡ್ ವೈಡ್, ಯಲ್ಲೋ ವೈಟ್, ಜಂಬೂ ರೇಡ್, ಸಿ ವೈರಟಿ, ರೆಗ್ಯುಲರ್ ರೆಡ್ ತರಹದ ಹಣ್ಣು ಬೆಳೆಯುತ್ತೇವೆ. ತಂತ್ರಜ್ಞಾನ ಬಳಸಿಕೊಂಡು ನಮ್ಮ ಜಮೀನುಗಳಿಗೆ ಹೊಂದುವಂತಹ ಹಲವು ಬೆಳೆಗಳನ್ನು ಬೆಳೆಯಬಹುದು. ಸಾಂಪ್ರಾದಾಯಿಕ ಕೃಷಿಯನ್ನು ಬಿಟ್ಟು ರೈತರು ಬೇರೆ ಬೆಳೆಗಳ ಕಡೆ ಗಮನವನ್ನು ಕೊಡಬೇಕು ಎಂದು ಲತಾ ಅವರು, ಉಳಿದ ರೈತರಿಗೆ ಸಲಹೆ ನೀಡಿದರು.
ಪಕ್ಕದ ರೈತರಿಗೆ ಅನುಕೂಲವಾಗಲಿ ಎಂದು ಈ ದಂಪತಿ ಉಚಿತವಾಗಿ ಡ್ರ್ಯಾಗನ್ ಫ್ರೂಟ್ ಸಸಿಗಳನ್ನು ವಿತರಣೆ ಮಾಡಿ ಉದಾರತೆ ಮೆರೆಯುತ್ತಿದ್ದಾರೆ. ಇವರುಗಳು ಸತತ ಪರಿಶ್ರಮದಿಂದ ಅಲ್ಪಸ್ವಲ್ಪ ನೀರಿನಲ್ಲಿಯೂ ಬರಡು ಭೂಮಿಯಲ್ಲಿ ಚಿನ್ನದಂತ ಬೆಳೆಯನ್ನು ಬೆಳೆದು ಕೃಷಿ ರಂಗದಲ್ಲಿ ಮಾದರಿಯಾಗಿದ್ದಾರೆ.
ಇದನ್ನೂ ಓದಿ: ಸಾಂಪ್ರದಾಯಕ ಬೇಸಾಯಕ್ಕೆ ಗುಡ್ ಬೈ; ಡ್ರ್ಯಾಗನ್ ಫ್ರೂಟ್ ಬೆಳೆದು ಕೈ ತುಂಬಾ ಸಂಪಾದಿಸುವ ಹಾವೇರಿ ರೈತ