ಬೆಳಗಾವಿ: ರಾಜ್ಯದ ಏಕೈಕ ತಾಂತ್ರಿಕ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ವಿರುದ್ಧ 45 ಕೋಟಿ ರೂ.ಗಳ ಬ್ರಹ್ಮಾಂಡ ಭ್ರಷ್ಟಾಚಾರದ ಗಂಭೀರ ಆರೋಪ ಕೇಳಿಬಂದಿದ್ದು, ರಾಜ್ಯದ ಜನತೆ ಹೌಹಾರುವಂತೆ ಮಾಡಿದೆ.
ವಿಟಿಯುನಲ್ಲಿನ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ವಾದ ಮಂಡಿಸಲು ವಕೀಲರಿಗೆ ಶುಲ್ಕವಾಗಿ (2019-2020 ರಲ್ಲಿ) 1 ವರ್ಷ ಅವಧಿಗೆ 41 ಕೋಟಿ ರೂ.ಗಳನ್ನು ಖರ್ಚು ಮಾಡಿರುವುದು ಬೆಳಕಿಗೆ ಬಂದಿದೆ. ಕೇವಲ1 ವರ್ಷದ ಅವಧಿಯಲ್ಲಿ ವಾದ ಮಂಡಿಸಲು ಇಷ್ಟೊಂದು ಹಣ ಖರ್ಚು ಮಾಡಲು ಸಾಧ್ಯವೇ ಎಂಬ ಬಗ್ಗೆ ಹಲವು ಅನುಮಾನಗಳು ಮೂಡಿವೆ.
ಬೆಳಗಾವಿ ಮೂಲದ ವಕೀಲ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಸುರೇಂದ್ರ ಉಗಾರೆ ಅವರು ಕೇಳಿದ ಮಾಹಿತಿಗೆ ಉತ್ತರವಾಗಿ ವಿಟಿಯು ಆಡಳಿತ ಮಂಡಳಿ ಮತ್ತೊಂದು ಅಂಕಿ- ಅಂಶ ನೀಡಿದೆ. ಅದರಲ್ಲಿ 68 ಲಕ್ಷ ರೂ.ಗಳು ಮಾತ್ರ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ವಾದ ಮಂಡಿಸಲು ವೆಚ್ಚ ಮಾಡಲಾಗಿದೆ. ಈ ಮೊದಲು ನೀಡಿದ 45 ಕೋಟಿ ರೂ.ಗಳ ಮಾಹಿತಿ ತಪ್ಪಾಗಿದೆ ಎಂದು ಉಲ್ಲೇಖಿಸಿದೆ. ಆದರೀಗ ಮತ್ತೆ 68 ಲಕ್ಷ ರೂ.ಗಳ ಮಾಹಿತಿ ಪತ್ರವನ್ನೂ ಮರಳಿಸುವಂತೆ ಮಾಹಿತಿ ಹಕ್ಕು ಕಾರ್ಯಕರ್ತ ಉಗಾರೆಗೆ ಕೇಳಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.
ಮಾಹಿತಿ ಹಕ್ಕು ಕಾರ್ಯಕರ್ತ ಸುರೇಂದ್ರ ಉಗಾರೆ, ಕಾನೂನು ಹೋರಾಟಕ್ಕಾಗಿ ವಿಟಿಯುನಿಂದ ವ್ಯಯಿಸಿರುವ ವೆಚ್ಚದ ಬಗ್ಗೆ ಮಾಹಿತಿ ನೀಡುವಂತೆ ಆರ್ಟಿಐ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. ವಿಟಿಯು ಅರ್ಜಿದಾರನಿಗೆ ನೀಡಿರುವ ಮಾಹಿತಿ ಪ್ರಕಾರ 2013-14 ರಲ್ಲಿ 67,91172 ರೂ, 2014-2015 ರಲ್ಲಿ 66,20,470 ರೂ, 2015-16 ರಲ್ಲಿ 1,00,40,743 ರೂ, 2016-17 ರಲ್ಲಿ 1,06,71,476 ರೂ, 2017-18 ರಲ್ಲಿ 72,90,698 ರೂ, 2018-19 ರಲ್ಲಿ 73,36,074 ಹಾಗೂ 2019-20 ರಲ್ಲಿ 41,07,58,746 ಹೀಗೆ ಒಟ್ಟು 45,95,09,379 ರೂ. ಪಾವತಿಸಿರುವುದು ಬೆಳಕಿಗೆ ಬಂದಿತ್ತು. ಆದರೀಗ ಮತ್ತೊಂದು ಮಾಹಿತಿ ಪತ್ರವನ್ನು ನೀಡಿದ ವಿಟಿಯು ಆಡಳಿತ ಮಂಡಳಿ ಈ ಮೊದಲು ನೀಡಿದ ಮಾಹಿತಿಯಲ್ಲಿ ಲೆಕ್ಕಪತ್ರದಲ್ಲಿ ತಪ್ಪಾಗಿದೆ. ಹೀಗಾಗಿ 68 ಲಕ್ಷ ರೂ.ಗಳು ಮಾತ್ರ ಖರ್ಚಾಗಿದೆ ಉಲ್ಲೇಖಿಸಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಸುರೇಂದ್ರ ಉಗಾರೆ ಆಗ್ರಹಿಸಿದ್ದಾರೆ.
ವಿಟಿಯು ಖರ್ಚು, ವೆಚ್ಚಗಳ ಸಮಗ್ರ ಮಾಹಿತಿ ಬಗ್ಗೆ ಸದ್ಯದಲ್ಲೇ ವಿಟಿಯು ನೀಡಿದ ಎರಡು ಪ್ರತಿಯ ಮಾಹಿತಿಯನ್ನು ಸೇರಿಸಿ ಲೋಕಾಯುಕ್ತ ಪೊಲೀಸರಿಗೆ ಪತ್ರ ಬರೆದು, ತನಿಖೆ ನಡೆಸಿ ವಿಟಿಯು ಆಡಳಿತ ಮಂಡಳಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಸಲಾಗುವುದೆಂದು ಸುರೇಂದ್ರ ಉಗಾರೆ ತಿಳಿಸಿದ್ದಾರೆ.