ಬೆಳಗಾವಿ: ಜಿಲ್ಲೆಯ ಗಡಿ ಭಾಗದ ಗ್ರಾಮ ಪಂಚಾಯಿತಿಗಳಲ್ಲಿ ಸರ್ಕಾರಿ ಪತ್ರ ವ್ಯವಹಾರಗಳು ಕನ್ನಡ ಭಾಷೆಯಲ್ಲಿಯೇ ನಡೆಯಬೇಕು. ಈ ಕುರಿತು ಜಿಲ್ಲಾ ಪಂಚಾಯಿತಿ ಸಿಇಓ ಜೊತೆ ಚರ್ಚೆ ನಡೆಸಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಟಿ.ಎಸ್.ನಾಗಾಭರಣ ತಿಳಿಸಿದ್ದಾರೆ.
ನಗರದ ಅತಿಥಿ ಗೃಹದಲ್ಲಿ ಜಿಲ್ಲಾ ಜಾಗೃತಿ ಸಮಿತಿ ಸದಸ್ಯರು ಹಾಗೂ ಕನ್ನಡ ಪರ ಸಂಘಟನೆಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮೂಲ ಉದ್ದೇಶ ರಾಜ್ಯದಲ್ಲಿ ಕನ್ನಡದಲ್ಲಿ ಆಡಳಿತ ವ್ಯವಹಾರ ನಡೆಯುವಂತೆ ನೋಡಿಕೊಳ್ಳುವುದಾಗಿದೆ. ಗಡಿ ಭಾಗದಲ್ಲಿ ಆಗುತ್ತಿರುವ ಭಾಷಾ ಸಮಸ್ಯೆಯನ್ನು ಪರಿಹರಿಸಲು, ಸರ್ಕಾರಿ ಇಲಾಖೆಯಲ್ಲಿ ಎಷ್ಟರ ಮಟ್ಟಿಗೆ ಕನ್ನಡ ಭಾಷೆಯಲ್ಲಿ ಪತ್ರ ವ್ಯವಹಾರಗಳು ಆಗುತ್ತಿವೆ ಎಂದು ಪರಿಶೀಲನೆ ಮಾಡುವುದಾಗಿ ಅವರು ಹೇಳಿದರು.

ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಯಿಂದ 8ನೇ ತರಗತಿಯವರೆಗೆ ಪ್ರಾದೇಶಿಕ ಭಾಷೆ ಕನ್ನಡವನ್ನು ಪ್ರಥಮ ಭಾಷೆಯಾಗಿ ವಿದ್ಯಾಭ್ಯಾಸ ಮಾಡಬೇಕಿದೆ. ನಂತರ ಮಕ್ಕಳಿಗೆ ಇಷ್ಟವಾದ ಭಾಷೆಯಲ್ಲಿ ಶಿಕ್ಷಣವನ್ನು ಪಡೆಯಬಹುದು. ಡಿಗ್ರಿ ವಿಭಾಗದಲ್ಲಿ ವಿದ್ಯಾರ್ಥಿಗಳು ತಮಗೆ ಬೇಕಾದ ಭಾಷೆಯಲ್ಲಿ ಶಿಕ್ಷಣ ಪಡೆಯಬಹುದು. ಆದರೆ, ಯಾವುದೇ ಶಿಕ್ಷಣ ಸಂಸ್ಥೆಯವರು ಕನ್ನಡವನ್ನು ಬದಿಗೊತ್ತಿ ಬೇರೆ ಭಾಷೆಯನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯ ಮಾಡುವಂತಿಲ್ಲ ಎಂದು ತಾಕೀತು ಮಾಡಿದರು.
ಗಡಿ ಭಾಗದಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ಬೇರೆ ಭಾಷೆಯನ್ನು ತೆಗೆದುಕೊಳ್ಳಲು ಒತ್ತಾಯ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಂಬಂದಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಶಿಕ್ಷಣದಲ್ಲಿ ಕನ್ನಡ ಭಾಷೆ ವಿಚಾರವನ್ನು ಶಿಕ್ಷಣ ಸಚಿವರ ಗಮನಕ್ಕೆ ತಂದು ಶಿಸ್ತಿನ ಕ್ರಮ ತೆಗೆದುಕೊಳ್ಳವಂತೆ ಮಾಡುವುದಾಗಿ ಹೇಳಿದರು.
ಇದನ್ನೂ ಓದಿ: ಚುನಾವಣೆ ಬರುತ್ತಿದ್ದಂತೆ ಮೋದಿ 2 ಬಾಂಬ್ ಇಟ್ಟುಕೊಳ್ತಾರೆ, ಎಲ್ಲಿ ಹಾಕ್ತೋರೊ ಗೊತ್ತಿಲ್ಲ: ಜಾರಕಿಹೊಳಿ
ಕನ್ನಡ ಬಾವುಟ ಹಾರಿಸುವ, ಕನ್ನಡ ನಾಮಫಲಕಗಳ ಬಳಕೆ ವಿಚಾರವಾಗಿ ಮಹಾನಗರ ಪಾಲಿಕೆಯ ಅಧಿಕಾರಿಗಳ ಜೊತೆ ಹಾಗೂ ಶಿಕ್ಷಣ ವಿಷಯಕ್ಕೆ ಸಂಬಂಧಿಸಿದಂತೆ, ಸಾರಿಗೆ ಸೌಲಭ್ಯ ವಿಚಾರವಾಗಿ ಸಾರಿಗೆ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ. ಜಿಲ್ಲಾ ಜಾಗೃತಿ ಸಮಿತಿ ಸದಸ್ಯರು ಹಾಗೂ ಕನ್ನಡ ಪರ ಸಂಘಟನೆಗಳು ನೀಡಿದ ಕನ್ನಡ ಭಾಷೆ ಅನುಷ್ಠಾನ ಕುರಿತ ಸಮಸ್ಯೆಗಳನ್ನು ಸೋಮವಾರ (ಜು.18) ರಂದು ನಡೆಯುವ ಜಿಲ್ಲಾ ಮಟ್ಟದ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳುವ ಕಾರ್ಯ ಮಾಡಲಾಗುವುದು ಎಂದು ಅವರು ಹೇಳಿದರು.