ಬೆಳಗಾವಿ : ಜಿಲ್ಲೆಯ ಮೂವರಿಗೆ ಕೊರೊನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಸೋಂಕಿತರು ವಾಸಿಸುತ್ತಿದ್ದ 3 ಕಿ.ಮೀ ವ್ಯಾಪ್ತಿ ನಿಷೇಧಿತ ಪ್ರದೇಶ ಹಾಗೂ ನಿಷೇಧಿತ ಪ್ರದೇಶದ ಹೊರಗಿನ 2 ಕಿ.ಮೀ ವ್ಯಾಪ್ತಿಯನ್ನು ಬಫರ್ ಜೋನ್ ಎಂದು ಘೋಷಿಸಲಾಗಿದೆ. ಈ ಪ್ರದೇಶದಲ್ಲಿ ಅನಗತ್ಯ ಕಾಲ್ನಡಿಗೆ, ವಾಹನ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ.
ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 8 ರಿಂದ 10ರವರೆಗೆ ಸಮಯ ನಿಗದಿ ಮಾಡಲಾಗಿದೆ. ಈ ಪ್ರದೇಶಕ್ಕೆ ಕರ್ತವ್ಯ ನಿರತ ವಾಹನಗಳಿಗೆ ಮಾತ್ರ ಪ್ರವೇಶ ಅವಕಾಶ ಕಲ್ಪಿಸಲಾಗಿದೆ. ನಗರದ ಒಂದು ಪ್ರದೇಶ, ಎರಡು ಗ್ರಾಮಗಳಲ್ಲಿ ತೀವ್ರ ಕಟ್ಟೆಚ್ಚರವಹಿಸಲಾಗಿದೆ. ಸೋಂಕಿತರು ಓಡಾಡಿದ ಸ್ಥಳಗಳಲ್ಲಿ ಈಗಾಗಲೇ ಔಷಧಿ ಸಿಂಪಡಣೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಸೋಂಕಿತರು ವಾಸಿಸುತ್ತಿದ್ದ ಪ್ರದೇಶದಲ್ಲಿ ಆಗಮನ-ನಿರ್ಗಮನ ನಿರ್ಬಂಧಿಸಲಾಗಿದೆ.
ರೋಗ್ಯ ಇಲಾಖೆಯಿಂದ ಬಡಾವಣೆ, ಗ್ರಾಮದ ಜನರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಸೋಂಕಿತರು ವಾಸಿಸುತ್ತಿದ್ದ ಪ್ರದೇಶದಿಂದ ಹೊರಬರುವ ಮುನ್ನ ಸ್ಯಾನಿಟೈಸರ್, ಮಾಸ್ಕ್ ಬಳಕೆ ಕಡ್ಡಾಯ ಮಾಡಲಾಗಿದೆ. ಸರ್ಕಾರದ ಆದೇಶ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲು ಓರ್ವ ನೋಡಲ್ ಅಧಿಕಾರಿಯನ್ನೂ ನೇಮಿಸಲಾಗಿದೆ.