ಬೆಳಗಾವಿ: ಜಾರ್ಖಂಡ್‌ನಿಂದ ಬೆಳಗಾವಿ ಜಿಲ್ಲೆಗೆ ಮರಳಿದ್ದ ಮತ್ತೋರ್ವ ವೃದ್ಧನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 126ಕ್ಕೆ ಏರಿಕೆಯಾಗಿದೆ.
ಜಾರ್ಖಂಡ್‌ನ ಶಿಖರ್ಜಿಗೆ ಧಾರ್ಮಿಕ ಯಾತ್ರೆಗೆಂದು ತೆರಳಿದ್ದ 75 ವರ್ಷದ ವೃದ್ಧನಿಗೆ (P-1687) ಕೊರೊನಾ ಸೋಂಕು ದೃಢಪಟ್ಟಿದೆ. 2 ತಿಂಗಳ ಹಿಂದೆ 28 ಜನರ ತಂಡ ಜಾರ್ಖಂಡ್‌ನ ಶಿಖರ್ಜಿಗೆ ಧಾರ್ಮಿಕ ಯಾತ್ರೆಗೆ ತೆರಳಿತ್ತು. ಲಾಕ್‌ಡೌನ್ ಘೋಷಣೆಯಾದ ನಂತರ ಇವರೆಲ್ಲಾ ಅಲ್ಲೇ ಉಳಿದುಕೊಂಡಿದ್ದರು. ಆದರೆ ಲಾಕ್‌ಡೌನ್ ಸಡಿಲಿಕೆ ಬಳಿಕ ಕರ್ನಾಟಕಕ್ಕೆ 28 ಜನರು ವಾಪಸ್ ಮರಳಿದ್ದರು. ಮೇ 6ರಂದು ಕಾಗವಾಡ ತಾಲೂಕಿನ ಶಿರಗುಪ್ಪಿಯಲ್ಲಿ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. ಈ 28 ಜನರ ಪೈಕಿ ನಿನ್ನೆ ಮೂವರಲ್ಲಿ ಕೊರೊನಾ ದೃಢಪಟ್ಟಿತ್ತು. ಇಂದು ಮತ್ತೆ ಈ ವೃದ್ಧನಲ್ಲಿ ಸೋಂಕು ಪತ್ತೆಯಾಗಿದೆ.