ಚಿಕ್ಕೋಡಿ: ದಿನದಿಂದ ದಿನಕ್ಕೆ ಮಹಾರಾಷ್ಟ್ರದಲ್ಲಿ ಕೊರೊನಾ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಜನತೆ ಹೊರಗಡೆ ತಿರುಗಾಡುವುದು ವ್ಯಾಪಾರ ವಹಿವಾಟಿನಲ್ಲಿ ತೊಡಗದಿರುವ ಪರಿಣಾಮ ಕರ್ನಾಟಕ - ಮಹಾರಾಷ್ಟ್ರ ಗಡಿಯಲ್ಲಿರುವ ಚಪ್ಪಲಿ ತಯಾರಿಕರ ಮೇಲೆ ಪ್ರಭಾವ ಬೀರಿದೆ.
ಗಡಿಯಲ್ಲಿರುವ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮದಬಾವಿ ಒಂದೇ ಗ್ರಾಮದ ಸಾವಿರಾರು ಕುಟುಂಬಗಳು ತಮ್ಮ ಜೀವನ ಸಾಗಿಸಲು ಅವಲಂಬಿತವಾಗಿದ್ದು, ಚಪ್ಪಲಿ ತಯಾರಿಕೆಯಲ್ಲಿ. ಇಲ್ಲಿ ತಯಾರಾದ ಚಪ್ಪಲಿಗಳಿಗೆ ಮಹಾರಾಷ್ಟ್ರದಲ್ಲೇ ಹೆಚ್ಚಿನ ಬೇಡಿಕೆ ಇದೆ. ಆದರೆ, ಮಹಾರಾಷ್ಟ್ರದಲ್ಲಿ ಕೊರೊನಾ ಹೆಚ್ಚುತ್ತಲಿರುವ ಕಾರಣ ತೊಗಲಿನ ಚಪ್ಪಲಿ ಮಾರಾಟವಾಗುತ್ತಿಲ್ಲ.
ತೊಗಲಿನ ಚಪ್ಪಲಿಗಳನ್ನು ಅತಿ ಹೆಚ್ಚಾಗಿ ಬೇಸಿಗೆ ಕಾಲದಲ್ಲಿ ಖರೀದಿ ಮಾಡುತ್ತಾರೆ. ಕಳೆದ ವರ್ಷವು ಕೂಡಾ ಬೇಸಿಗೆಯಲ್ಲಿ ಲಾಕ್‌ಡೌನ್ ಮಾಡಿದ್ದರಿಂದ ತಯಾರಿಸಿದ ಚಪ್ಪಲಿಗಳು ಹಾಗೆ ಇವೆ. ಈ ವರ್ಷವು ಕೂಡಾ ತಯಾರಿಸಿದ ಚಪ್ಪಲಿಗಳು ಹಾಗೆ ಇರುವುದರಿಂದ ಹಾಕಿದ ಬಂಡವಾಳಕ್ಕೆ ಬಡ್ಡಿ ಕಟ್ಟುವ ಪ್ರಸಂಗ ಇಲ್ಲಿನ ಚಮ್ಮಾರರಿಗೆ ಬಂದೊದಗಿದೆ.
ಮದಬಾವಿ ಗ್ರಾಮದಲ್ಲಿ ಕುರುಂದವಾಡ ಚಪ್ಪಲಿ, ಬಂಟು, ಬ್ಯಾನರ್ಜಿ, ಮಹಾರಾಜ, ಸೇನಾಪತಿ, ಕೊಲ್ಲಾಪುರಿ ಸೇರಿದಂತೆ ಅನೇಕ ರೀತಿಯ ಚಪ್ಪಲಿಗಳನ್ನು ತಯಾರಿಸಲಾಗುತ್ತದೆ. ಪುಣೆ, ಮುಂಬೈ, ದೆಹಲಿ ಸೇರಿದಂತೆ ಈ ಚಪ್ಪಲಿಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯೂ ಇದೆ. ಕಳೆದ ಒಂದು ವರ್ಷದಿಂದ ಮಾರುಕಟ್ಟೆಯಿಲ್ಲದೇ ತುಂಬಾ ನಷ್ಟವಾಗಿದೆ.ಈ ಹಿನ್ನೆಲೆ ಚಮ್ಮಾರರು ಸದ್ಯ ಕಷ್ಟದಲ್ಲಿದ್ದು ಸರ್ಕಾರ ಇವರಿಗೆ ಸಹಾಯ ಹಸ್ತ ಚಾಚಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.