ಚಿಕ್ಕೋಡಿ: ರೈತರು ಬೆಳೆದ ಗೋವಿನ ಜೋಳ ಬೆಳೆಯ ಸರ್ವೆಯನ್ನು ಅಧಿಕಾರಿಗಳು ಸರಿಯಾಗಿ ಮಾಡಿಲ್ಲ. ಹೀಗಾಗಿ, ಮರು ಸರ್ವೆ ಮಾಡುವಂತೆ ಹುಕ್ಕೇರಿ ತಾಲೂಕಿನ ರೈತ ಹಿತರಕ್ಷಣಾ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ತಾಲೂಕಿನ ನೂರಾರು ರೈತ ಮುಖಂಡರು ಪಟ್ಟಣದ ಅಡವಿಸಿದ್ದೇಶ್ವರ ಮಠದ ಆವರಣದಲ್ಲಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.
ಗೋವಿನ ಜೋಳ ಬೆಳೆದ ರೈತನಿಗೆ ಸರ್ಕಾರ ಸಹಾಯಧನ ಘೋಷಿಸಿದೆ. ಆದರೆ, ಹುಕ್ಕೇರಿ ತಾಲೂಕಿನಲ್ಲಿ ಅಧಿಕಾರಿಗಳು ಸರ್ವೆ ಕಾರ್ಯವನ್ನು ತರಾತುರಿಯಲ್ಲಿ ಮಾಡಿದ್ದಾರೆ. ಕೆಲ ರೈತರು ಪಟ್ಟಿಯಿಂದ ಬಿಟ್ಟು ಹೋಗಿದ್ದು, ಪರಿಹಾರ ಸಿಗದೆ ವಂಚಿತರಾಗಿದ್ದಾರೆ ಎಂದು ಹುಕ್ಕೇರಿ ತಹಶೀಲ್ದಾರ ಅಶೋಕ ಗುರಾಣಿ ಅವರಿಗೆ ಪ್ರತಿಭಟನಾಕಾರರು ಮನವರಿಕೆ ಮಾಡಿದರು.
ಕೆಲ ರೈತರಿಗೆ ಇದರಿಂದ ಮೋಸವಾಗಿದ್ದು, ಗೋವಿನ ಜೋಳ ಬೆಳೆದ ರೈತರ ಮರು ಸರ್ವೆ ಮಾಡಬೇಕು. ಪಟ್ಟಿಯಿಂದ ಬಿಟ್ಟುಹೋದ ರೈತರನ್ನು ಸೇರ್ಪಡೆ ಮಾಡಬೇಕು. ಅಧಿಕಾರಿಗಳ ಬೇಜವಾಬ್ದಾರಿಯಿಂದ ರೈತರು ಸಂಕಷ್ಟ ಅನುಭವಿಸಬೇಕಾಗಿದೆ. ಇದೇ ರೀತಿ ಮುಂದುವರಿದರೆ ಅಧಿಕಾರಿಗಳ ವಿರುದ್ಧ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದರು.