ಬೆಳಗಾವಿ: ಸಾಂಬ್ರಾ ವಿಮಾನ ನಿಲ್ದಾಣ ಅಭಿವೃದ್ಧಿಗೆ ಎಲ್ಲ ರೀತಿಯಿಂದಲೂ ನನ್ನ ಸಹಕಾರವಿದೆ. ಆದರೆ ಸುತ್ತಲಿನ ಹಳ್ಳಿಗಳಿಗೆ ಮತ್ತು ರೈತರಿಗೆ ಯಾವುದೇ ರೀತಿ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಸಾಂಬ್ರಾ ವಿಮಾನ ನಿಲ್ದಾಣದ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚುವರಿ ಜಮೀನಿನ ಬೇಡಿಕೆ ಇಟ್ಟ ಹಿನ್ನೆಲೆ ಮಂಗಳವಾರ ಸ್ಥಳ ಪರಿಶೀಲನೆ ನಡೆಸಿದ ನಂತರ ನಡೆದ ಉನ್ನತಾಧಿಕಾರ ಮಟ್ಟದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ವಿಮಾನ ನಿಲ್ದಾಣ ಅಭಿವೃದ್ಧಿಗೆ ಅನುಕೂಲ ಮಾಡಿಕೊಡೋಣ. ಆದರೆ ಸಾಂಬ್ರಾ ವಿಮಾನ ನಿಲ್ದಾಣಕ್ಕಾಗಿ ಈಗಾಗಲೇ ರೈತರು ಸಾಕಷ್ಟು ಜಮೀನನ್ನು ನೀಡಿದ್ದಾರೆ. ಇನ್ನು ಮುಂದೆ ಯಾವುದೇ ಮನೆಗಳನ್ನು ತೆರವುಗೊಳಿಸಲು ಅವಕಾಶ ನೀಡುವುದಿಲ್ಲ. ಜತೆಗೆ ರೈತರಿಂದ ಬಲಾತ್ಕಾರ ಉಪಯೋಗಿಸಿ ಜಮೀನು ವಶಪಡಿಸಿಕೊಳ್ಳುವಂತಿಲ್ಲ. ರೈತರೊಂದಿಗೆ ಚರ್ಚಿಸದ ಹೊರತು ಯಾವುದೇ ಮುಂದಡಿ ಇಡಲು ಅವಕಾಶ ಕೊಡುವುದಿಲ್ಲ. ರೈತರನ್ನು ಮೊದಲು ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಆಸೀಫ್ ಸೇಠ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ತ್ಯಾಗರಾಜನ್, ಪೋಲಿಸ್ ಆಯುಕ್ತ ಸಿದ್ರಾಮಪ್ಪ, ಎಸ್. ಪಿ ಭೀಮಾಶಂಕರ್ ಗುಳೇದ್, ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಡಿಸಿಪಿ ಸ್ನೇಹಾ ಪಿ. ವಿ ಸೇರಿದಂತೆ ಮತ್ತಿತರರು ಇದ್ದರು.
ರಾಜ್ಯದಲ್ಲೂ ಜಾತಿ ಗಣತಿ ವರದಿ ಬಿಡುಗಡೆ ಆಗಲಿ:ಸಚಿವ ಸತೀಶ ಜಾರಕಿಹೊಳಿ : ಬಿಹಾರ ಸರ್ಕಾರ ಜಾತಿ ಗಣತಿ ವರದಿ ಜಾರಿ ಮಾಡಿದ್ದನ್ನು ಸ್ವಾಗತಿಸುತ್ತೇವೆ. ಅದೇ ರೀತಿ ರಾಜ್ಯದಲ್ಲೂ ಜಾತಿ ಗಣತಿ ವರದಿ ಬಿಡುಗಡೆ ಮಾಡಿದರೆ ಒಳ್ಳೆಯದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಮ್ಮದು ಸುಮಾರು ವರ್ಷಗಳ ಹಿಂದೆ ತಯಾರಾಗಿದೆ. ಸರ್ಕಾರ ಮತ್ತು ಸಿಎಂ ನಿರ್ಧಾರ ಮಾಡಬೇಕು. ಜಾತಿ ಗಣತಿ ವರದಿ ಜಾರಿ ಮಾಡುವುದು ಒಳ್ಳೆಯದು. ಯಾವ ಸಮುದಾಯಕ್ಕೆ ಏನೇನು ಕಾರ್ಯಕ್ರಮ ಮಾಡಬೇಕು. ಹೆಚ್ಚಿನ ಅನುದಾನ ಕೊಡಬೇಕು ಅನ್ನೋದು ಗೊತ್ತಾಗುತ್ತದೆ ಎಂದರು.
ಸಾಮಾಜಿಕವಾಗಿ, ಶೈಕ್ಷಣಿಕ ಲೆಕ್ಕಾಚಾರದಲ್ಲಿ ಬಹಳ ಒಳ್ಳೆಯ ಬೆಳವಣಿಗೆ ನಮ್ಮಲ್ಲಿಯೂ ಆಗಬೇಕು ಅನ್ನೋದು ನಮ್ಮ ಆಸೆ ಇದೆ. ಕಳೆದ ಬಾರಿ ಚುನಾವಣೆ ವೇಳೆಗೆ ಮಾಡೋಕೆ ಆಗಲಿಲ್ಲ. ನಮ್ಮ ಸರ್ಕಾರದ ಹಂತದಲ್ಲಿ ಚರ್ಚೆ ಆಗುತ್ತಿದ್ದು, ಆದಷ್ಟು ಬೇಗ ಸರ್ಕಾರ ಗಮನ ಹರಿಸಬೇಕು. ಜನಗಣತಿ ವರದಿಗೆ 200 ಕೋಟಿ ರೂ. ಖರ್ಚು ಮಾಡಿರಬೇಕು. ಆದಷ್ಟು ಬೇಗ ವರದಿ ಜಾರಿ ಆಗಬೇಕು ಎಂದು ಒತ್ತಾಯಿಸಿದರು.
ಇದನ್ನೂಓದಿ:ಜಾತಿಗಣತಿ ಮಾಡುವ ಪರಮಾಧಿಕಾರ ಕೇಂದ್ರ ಸರ್ಕಾರಕ್ಕಿದೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ