ಬೆಳಗಾವಿ: ಸವದತ್ತಿ ಹಾಗೂ ರಾಮದುರ್ಗ ತಾಲೂಕಿನ ಗಡಿ ಅಂಚಿನಲ್ಲಿರುವ ಸವದತ್ತಿ ತಾಲೂಕಿನ ತೆಗ್ಗಿಹಾಳ ಗ್ರಾಮದ ತೋಟದ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಕುಕ್ಕರ್ಗಳನ್ನು ಪೊಲೀಸ್ ಹಾಗೂ ಎಫ್ಎಸ್ಟಿ ತಂಡವು ಇಂದು ಮಧ್ಯಾಹ್ನ ವಶಕ್ಕೆ ಪಡೆದುಕೊಂಡಿದೆ.
ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ತಂಡವು ತೋಟದ ಮನೆಯ ತಗಡಿನ ಶೆಡ್ನಲ್ಲಿದ್ದ ಸುಮಾರು 1600 ಕುಕ್ಕರ್ಗಳನ್ನು ಜಪ್ತಿ ಮಾಡಿದೆ. ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರ ನಿರ್ದೇಶನದಂತೆ ಎಫ್ಎಸ್ ಟಿ ಟೀಮ್ ಹಾಗೂ ಸವದತ್ತಿ ವಲಯದ ಅಧಿಕಾರಿಗಳು ಸಿಬ್ಬಂದಿಯೊಂದಿಗೆ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 54ರ ಅಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಶೆಡ್ಡಿನ ಬಾಗಿಲನ್ನು ತೆರೆದು ನೋಡಿದಾಗ ಕುಕ್ಕರ್ ಪೆಟ್ಟಿಗೆಗಳಿರುವುದು ಕಂಡು ಬಂದಿದೆ. ಮುಂದಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.
ರಾಯಚೂರಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸಿಎಚ್ ಪೌಡರ್ ವಶಕ್ಕೆ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಮೀನೊಳಗೆ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ನಿಷೇಧಿತ ಸೇಂದಿ ತಯಾರಿಸುವ ನೂರಾರು ಕೆ.ಜಿ. ಸಿಎಚ್ ಪೌಡರ್ ಅನ್ನು ಅಬಕಾರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ರಾಯಚೂರು ತಾಲೂಕಿನ ಕಡ್ಗಂದೊಡ್ಡಿ ಗ್ರಾಮದ ಹೊರವಲಯದ ಜಮೀನು ಒಂದರಲ್ಲಿ ಸಣ್ಣದೊಂದು ಕೋಣೆಯಂತೆ ನಿರ್ಮಿಸಿ ಸಿಎಚ್ ಪೌಡರ್ ಸಂಗ್ರಹಿಸಿ ಇರಿಸಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಸೇಂದಿ ಪೌಡರ್ ಅನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಆಂದಾಜು 70 ಸಾವಿರ ರೂ. ಮೌಲ್ಯದ ತಲಾ 25 ಕೆ.ಜಿ.ಯ ಪ್ಯಾಕೇಟ್, ಒಟ್ಟು 32 ಪ್ಯಾಕೇಟ್ಗಳಲ್ಲಿ ಸುಮಾರು 800 ಕೆ.ಜಿಯಷ್ಟು ಸಿಎಚ್ ಪೌಡರ್ ಅನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ತಾಯನ ಗೌಡ ಎನ್ನುವವರು ಇದನ್ನು ಸಂಗ್ರಹಿಸಿಟ್ಟಿದ್ದಾರೆ ಎನ್ನುವ ಖಚಿತ ಮಾಹಿತಿ ಇತ್ತು. ಆದರೆ, ಪೌಡರ್ ಜಪ್ತಿ ಮಾಡಿದ ಹೊಲ ತಾಯನ ಗೌಡ ತಂದೆ ನರಸರಾಜ ಎನ್ನುವವರ ಹೆಸರಿನಲ್ಲಿದೆ. ಈ ಮೊದಲೇ ಅವರ ಮೇಲೆ ಎರಡ್ಮೂರು ಪ್ರಕರಣಗಳು ದಾಖಲಾಗಿದ್ದವು. ಮುಂದಿನ ದಿನಗಳಲ್ಲಿ ಗಡಿಪಾರಿಗೆ ಶಿಫಾರಸು ಮಾಡಲಾಗುವುದು. ಸದ್ಯ ಜಪ್ತಿ ಮಾಡಿಕೊಂಡಿರುವ ಸಿಎಚ್ ಪೌಡರ್ ವಶಕ್ಕೆ ಪಡೆದುಕೊಂಡು, ಇಬ್ಬರ ಮೇಲೆ ಅಬಕಾರಿ ಇಲಾಖೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳುವುದಾಗಿ ಅಬಕಾರಿ ಇಲಾಖೆ ಜಿಲ್ಲಾಧಿಕಾರಿ ಲಕ್ಷ್ಮಿ ನಾಯಕ ತಿಳಿಸಿದ್ದಾರೆ.
ಸಿಎಚ್ ಪೌಡರ್ ತಂದು, ಸೇಂದಿಯಾಗಿ ಮಾಡಿ ರಾಯಚೂರು ನಗರ ಹಾಗೂ ತಾಲೂಕಿನ ಸುತ್ತಮುತ್ತಲ ಪ್ರದೇಶದಲ್ಲಿ ಮಾರಾಟ ಮಾಡುತ್ತಿರುವುದು ಹಲವು ವರ್ಷಗಳಿಂದ ನಡೆಯುತ್ತಿದೆ. ಇದನ್ನು ತಡೆಗಟ್ಟಲು ಸತತವಾಗಿ ಅಬಕಾರಿ ಇಲಾಖೆಯಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆದರೂ ಕೆಲವರು ಅಕ್ರಮವಾಗಿ ತಂದು ಮಾರಾಟ ಮಾಡುತ್ತಿರುವುದು ದಾಳಿಯಿಂದ ಬೆಳಕಿಗೆ ಬರುತ್ತಿದೆ. ಇದೀಗ ಚುನಾವಣೆ ಸಂದರ್ಭದಲ್ಲಿ ನೂರಾರು ಕೆಜಿಯಷ್ಟು ಪತ್ತೆಯಾಗಿದೆ. ಚುನಾವಣೆ ಸಂದರ್ಭ ಆಗಿರುವುದರಿಂದ ಇಷ್ಟೊಂದು ಪ್ರಮಾಣದಲ್ಲಿ ಸಿಎಚ್ ಪೌಡರ್ ತಂದಿರಬಹುದೆಂದು ಹೇಳಲಾಗುತ್ತಿದೆ. ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಚುನಾವಣೆ ಬೆನ್ನಲ್ಲೇ ಗೋವಾದಿಂದ ಹರಿದು ಬರುತ್ತಿದೆ ಅಗ್ಗದ ಮದ್ಯ, ಕಂತೆ ಕಂತೆ ನೋಟು!!