ಚಿಕ್ಕೋಡಿ(ಬೆಳಗಾವಿ) : ಗಡಿನಾಡು ಬೆಳಗಾವಿ ಜಿಲ್ಲೆಯ ರಾಯಬಾಗದ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ಹಾಗೂ ತಹಶೀಲ್ದಾರ್ ಚಂದ್ರಕಾಂತ ಭಜಂತ್ರಿ ನಡುವಿನ ಕಿತ್ತಾಟ, ಈಗ ಬೀದಿಗೆ ಬಂದು ನಿಂತಿದೆ. ಶಾಸಕರ ಅಣತಿಯಂತೆ ನನ್ನನ್ನು ವಸತಿ ನಿಲಯದಿಂದ ಹೊರಕ್ಕೆ ತಳ್ಳಿದ್ದಾರೆಂದು ತಹಶೀಲ್ದಾರ್ ಭಜಂತ್ರಿ ಆರೋಪಿಸಿದ್ದಾರೆ. ಇತ್ತ ಭ್ರಷ್ಟಾಚಾರ ಮಾಡಿದ್ದಕ್ಕೆ ಸರ್ಕಾರ ಅವರನ್ನು ಇಲ್ಲಿಂದ ಕಿತ್ತು ಹಾಕಿದೆ ಎಂದು ಶಾಸಕ ಐಹೊಳೆ ತಹಶೀಲ್ದಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಗೋಮಾಳ ಜಾಗ ವಿಚಾರದಲ್ಲಿ ಇಬ್ಬರ ಮಧ್ಯೆ ಕಿತ್ತಾಟ ಮುಂದುವರೆದಿದೆ. ಸದ್ಯ ತಹಶೀಲ್ದಾರ್ ಭಜಂತ್ರಿಯನ್ನ ಶಾಸಕ ಐಹೊಳೆ ತಮ್ಮ ಪ್ರಭಾವ ಬಳಸಿ ವರ್ಗಾವಣೆ ಮಾಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲ, ರಾಯಬಾಗ ರಾಣಿ ಚೆನ್ನಮ್ಮ ವಸತಿ ನಿಲಯದಲ್ಲಿ ವಾಸವಾಗಿದ್ದ ನನ್ನನ್ನು ತಮ್ಮ ಪ್ರಭಾವ ಬಳಸಿ ರಾತ್ರೋರಾತ್ರಿ ಹೊರಕ್ಕೆ ಹಾಕಿದ್ದಾರೆಂದು ತಹಶೀಲ್ದಾರ್ ಭಜಂತ್ರಿ ಆರೋಪ ಮಾಡಿದ್ದಾರೆ. ವರ್ಗಾವಣೆಯನ್ನ ಪ್ರಶ್ನೆ ಮಾಡಿದ ತಹಶೀಲ್ದಾರ್ ಭಜಂತ್ರಿ ಕೆಎಟಿ ಮೊರೆ ಹೋಗಿದ್ದಾರೆ.
ಇತ್ತ ತಹಶೀಲ್ದಾರ್ ಭಜಂತ್ರಿ ಆರೋಪವನ್ನ ಶಾಸಕ ದುರ್ಯೋದನ ಐಹೊಳೆ ತಳ್ಳಿ ಹಾಕಿದ್ದು, ಸರ್ಕಾರ ಭ್ರಷ್ಟಾಚಾರ ಮಾಡಿದ್ದರಿಂದ ಅವರನ್ನ ರಾಯಬಾಗದಿಂದ ಕಿತ್ತು ಹಾಕಿದೆ. ವರ್ಗಾವಣೆಯಲ್ಲಿ ನನ್ನದೇನು ಪಾತ್ರವಿಲ್ಲ. ವಸತಿ ನಿಲಯಗಳನ್ನ ಜಿಲ್ಲಾಡಳಿತ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿದೆ. ಈ ವಿಚಾರವಾಗಿ ತಹಶೀಲ್ದಾರ್ ಮತ್ತು ಮೇಲಾಧಿಕಾರಿಗಳ ಮಧ್ಯೆ ವಾಗ್ವಾದ ನಡೆದಿದೆ. ಆ ಕಾರಣಕ್ಕೆ ಅವರನ್ನು ವಸತಿ ನಿಲಯ ಖಾಲಿ ಮಾಡುವಂತೆ ಹೇಳಿದ್ದಾರೆ ಎಂದು ಹೇಳಿದರು.
ತಹಶೀಲ್ದಾರ್ ಕ್ವಾಟರ್ಸ್ ಇದ್ದರೂ ಅಲ್ಲಿ ಅವರು ವಾಸವಾಗಿರಲಿಲ್ಲ. ತಹಶೀಲ್ದಾರ್ ವಿರುದ್ಧ ನನಗೆ ಯಾವುದೇ ದ್ವೇಷವಿಲ್ಲ. ಭ್ರಷ್ಟಾಚಾರ ಮಾಡಿದ್ರೆ ನಾನು ಸುಮ್ಮನಿರಲು ಹೇಗೆ ಸಾಧ್ಯ?. ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಶಾಸಕ ದುರ್ಯೋದನ ಐಹೊಳೆ ಕಿಡಿಕಾರಿದ್ದಾರೆ.
ತಹಶೀಲ್ದಾರ್ ಮತ್ತು ಶಾಸಕರಿಬ್ಬರ ಮಧ್ಯದ ಜಟಾಪಟಿ ಈಗ ತಾರಕಕ್ಕೇರಿದ್ದು, ಇಬ್ಬರು ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿಕೊಂಡಿದ್ದಾರೆ. ಈ ಕಿತ್ತಾಟ ಸರ್ಕಾರಕ್ಕೆ ಮುಜುಗರ ಉಂಟು ಮಾಡಿದಂತೂ ಸುಳ್ಳಲ್ಲ. ಈಗಾಗಲೇ ತಾಲೂಕಿನಲ್ಲಿ ಕೋವಿಡ್ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲಿದ್ದು, ಇವರು ಈ ರೀತಿ ಹಾವು ಮುಂಗುಸಿಯಂತೆ ಜಗಳವಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಸಾರ್ವಜನಿಕರ ಮಾತಾಗಿದೆ.