ಬೆಳಗಾವಿ: ಮರಾಠಿ ಸಾಹಿತ್ಯ ಲೋಕಕ್ಕೆ ಕನ್ನಡಿಗರ ಕೊಡುಗೆ ಅನನ್ಯ. ಪಂಡಿತ್ ಭೀಮಸೇನ್ ಜೋಶಿ ಕೇವಲ ಕರ್ನಾಟಕಕ್ಕೆ ಸೀಮಿತವಾಗಿರಲಿಲ್ಲ ಎಂದು ಶಿವಸೇನೆ ವಕ್ತಾರ ಸಂಜಯ್ ರಾವುತ್ ಹೇಳಿದರು.
ಬೆಳಗಾವಿಯ ಗೋಗಟೆ ರಂಗಮಂದಿರದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ನೆಲದ ಹಲವು ಸಾಹಿತಿಗಳು ಮರಾಠಿ ಸಾಹಿತ್ಯ ಅಪಾರ ಕೊಡುಗೆ ನೀಡಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ ಗಡಿ ವಿವಾದ ಕೌರವ, ಪಾಂಡವರ ಯುದ್ಧವಲ್ಲ. ಉಭಯ ರಾಜ್ಯಗಳ ಗಡಿ ವಿವಾದ ಸುಪ್ರೀಂಕೋರ್ಟ್ನಲ್ಲಿದೆ. ಇದಕ್ಕಾಗಿ ಮಹಾರಾಷ್ಟ್ರ ಸರ್ಕಾರ ಉತ್ತಮ ವಕೀಲರನ್ನು ನೇಮಿಸಿದೆ. ಸುಪ್ರೀಂಕೋರ್ಟ್ನಿಂದ ಯಾವ ತೀರ್ಪು ಬರುತ್ತೆ ಎಂಬುವುದನ್ನು ಕಾದು ನೋಡೋಣ ಎಂದು ಪ್ರತಿಕ್ರಿಯೆ ನೀಡಿದರು.
ಶಿವಸೇನೆ ನೇತೃತ್ವದ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿಯಲು ಮಲ್ಲಿಕಾರ್ಜುನ ಖರ್ಗೆ ಕೊಡುಗೆ ಅಪಾರ. ಖರ್ಗೆ ಮಹಾರಾಷ್ಟ್ರ ಕಾಂಗ್ರೆಸ್ ಉಸ್ತುವಾರಿಯಾಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆರವರ ಜೊತೆ ನಾನು ಮರಾಠಿಯಲ್ಲೇ ಮಾತನಾಡುತ್ತೇನೆ ಎಂದರು.
ಇದಕ್ಕೂ ಮೊದಲು ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಡಿ ವಿವಾದ ಸಂಬಂಧ ಹೇಳಿಕೆ ನೀಡದಂತೆ ಸಿಎಂ ಉದ್ಧವ್ ಠಾಕ್ರೆ ನಿರ್ದೇಶನ ನೀಡಿದ್ದಾರೆ. ಕೆಲ ದಿನಗಳ ಹಿಂದೆ ಗಡಿ ವಿವಾದ ಸಂಬಂಧ ಪ್ರತಿಕ್ರಿಯಿಸದಂತೆ ಶಿವಸೇನೆ ಮುಖಂಡರಿಗೆ ಠಾಕ್ರೆ ಸೂಚಿಸಿದ್ದಾರೆ ಎಂದರು.
ಗಡಿವಿವಾದ ಸಮಸ್ಯೆ ಸುಪ್ರೀಂ ಕೋರ್ಟ್ನಲ್ಲಿ ಇತ್ಯರ್ಥವಾಗಲಿದೆ. ಸುಪ್ರೀಂಕೋರ್ಟ್ ಉಭಯ ರಾಜ್ಯಗಳ ವಾದ ಆಲಿಸಲಿದೆ. ಬಳಿಕ ಸುಪ್ರೀಂ ಕೋರ್ಟ್ ನೀಡುವ ತೀರ್ಪಿಗೆ ನಾವು ಬದ್ಧರಾಗಿರಬೇಕು. ದಶಕದ ಅಯೋಧ್ಯೆ-ರಾಮಮಂದಿರ ವಿವಾದ ಇತ್ಯರ್ಥವಾಗಿದೆ. ದೇಶದ ಸಂವಿಧಾನ, ನ್ಯಾಯಾಲಯ ಎಲ್ಲದಕ್ಕಿಂತ, ಎಲ್ಲರಿಗಿಂತ ದೊಡ್ಡದು. ಹೀಗಾಗಿ ಗಡಿವಿವಾದ ಬಗ್ಗೆ ಸುಪ್ರೀಂಕೋರ್ಟ್ ನಿರ್ಧರಿಸಲಿ ಎಂದು ಸಿಎಂ ಉದ್ಧವ್ ಠಾಕ್ರೆ ಹೇಳಿದ್ದಾರೆ ಎಂದು ಶಿವಸೇನೆ ವಕ್ತಾರ ಸಂಜಯ್ ರಾವುತ್ ಹೇಳಿದರು.