ಬೆಳಗಾವಿ: ಉಡುಪಿಯಲ್ಲಿ ಆತ್ಮಹತ್ಯೆಗೆ ಶರಣಾದ ಗುತ್ತಿಗೆದಾರ ಸಂತೋಷ್ ಪಾಟೀಲ್ ಮೃತದೇಹವನ್ನು ಬೆಳಗಾವಿ ತಾಲೂಕಿನ ಸ್ವಗ್ರಾಮ ಬಡಸ ಗ್ರಾಮಕ್ಕೆ ತರಲಾಗಿದೆ. ಸಂತೋಷ್ ಪಾಟೀಲ್ ಅವರು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಶೇ 40ರಷ್ಟು ಕಮಿಷನ್ ಆರೋಪ ಮಾಡಿ ಮಂಗಳವಾರ ಆತ್ಮಹತ್ಯೆಗೆ ಶರಣಾಗಿದ್ದರು.
ಉಡುಪಿಯಲ್ಲಿರುವ ಖಾಸಗಿ ಲಾಡ್ಜ್ನಲ್ಲಿ ಸಂತೋಷ್ ಪಾಟೀಲ್ ಮೃತದೇಹ ಪತ್ತೆಯಾಗಿತ್ತು. ಕಿತ್ತೂರು ತಾಲೂಕಿನ ಎಂ.ಕೆ. ಹುಬ್ಬಳ್ಳಿ ಮೂಲಕ ಬಡಸ ಗ್ರಾಮಕ್ಕೆ ಮೃತದೇಹ ತರಲಾಗಿದೆ. ಅಲ್ಲಿದ್ದ ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿದ ಕುಟುಂಬಸ್ಥರು, ಆರೋಪಿಗಳನ್ನು ಬಂಧಿಸಲು ಅಗತ್ಯವಾದ ದಾಖಲೆಗಳು ನಮ್ಮ ಬಳಿಯೂ ಸಾಕಷ್ಟಿವೆ. ಅವುಗಳನ್ನು ಕೊಡಲಾಗುವುದು. ಆರೋಪಿಗಳನ್ನು ಬಂಧಿಸುವವರೆಗೂ ಅಂತ್ಯಕ್ರಿಯೆ ನಡೆಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಉಡುಪಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಲ್ಲಿಯವರು ತನಿಖಾ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಮೃತದೇಹವನ್ನು ಪೊಲೀಸ್ ಬಿಗಿ ಭದ್ರತೆಯಲ್ಲಿ ತರಲಾಗಿದೆ. ಗ್ರಾಮದಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಈಗಾಗಲೇ ಆತ್ಮಹತ್ಯೆ ಸಂಬಂಧ ಸಚಿವ ಈಶ್ವರಪ್ಪ ಮತ್ತು ಅವರ ಇಬ್ಬರು ಆಪ್ತರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅಲ್ಲದೆ, ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷಗಳು, ಗುತ್ತಿಗೆದಾರರ ಸಂಘಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ಸಂತೋಷ್ ಪಾಟೀಲ್ ಮರಣೋತ್ತರ ಪರೀಕ್ಷೆ ಅಂತ್ಯ: ಬೆಳಗಾವಿಯತ್ತ ಮೃತದೇಹ