ಬೆಳಗಾವಿ: ಕೊರೊನಾ ಎರಡನೇ ಅಲೆ ಹಳ್ಳಿಗಳಿಗೂ ವ್ಯಾಪಿಸಿದ್ದರಿಂದ ಸೋಂಕು ತಡೆಗೆ ಲಾಕ್‍ಡೌನ್ ಮುಂದುವರಿಯಬೇಕು ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಗೋಕಾಕ ತಾಲೂಕು ಆಸ್ಪತ್ರೆಗೆ ಡಿಸಿ ಎಂ.ಜಿ. ಹಿರೇಮಠ ಅವರೊಂದಿಗೆ ದಿಢೀರ್ ಭೇಟಿ ನೀಡಿ ಕೋವಿಡ್ ವಸ್ತುಸ್ಥಿತಿ, ನಿರ್ವಹಣೆ ಸ್ಥಿತಿಗತಿ ಬಗ್ಗೆ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋವಿಡ್ ನಿರ್ವಹಣೆಗೆ ಎಲ್ಲರ ಸಹಕಾರ ಬೇಕು. ಹಳ್ಳಿಗಳಲ್ಲೂ ಕೋವಿಡ್ ವ್ಯಾಪಿಸಿದ್ದು, ಲಾಕ್‍ಡೌನ್ ಮುಂದುವರಿಕೆ ಅಗತ್ಯವಾಗಿದೆ ಎಂದರು.
ಕೋವಿಡ್ ಸೋಂಕಿತರಿಗೆ ಬೆಡ್‍ಗಳ ಕೊರತೆ, ಸೌಲಭ್ಯಗಳ ಕೊರತೆ ನೀಗಿಸಲು ತುರ್ತು ಕ್ರಮವಹಿಸಬೇಕು. ಕೋವಿಡ್ ಪರಿಸ್ಥಿತಿ ಎದುರಿಸಲು ಎಲ್ಲರೂ ಕೈ ಜೋಡಿಸಬೇಕು. ಸೋಂಕಿತರಿಗೆ ಸಮರ್ಪಕ ಚಿಕಿತ್ಸೆ ಜೊತೆಗೆ ಲಸಿಕೆ ನೀಡಿಕೆಗೂ ಸರ್ಕಾರ ಆದ್ಯತೆ ನೀಡಿದೆ. ಮೊದಲನೇ ಡೋಸ್ ಪಡೆದುಕೊಂಡವರಿಗೆ ಎರಡನೇ ಡೋಸ್ ನೀಡಲು ಆದ್ಯತೆ ನೀಡಲಾಗಿದೆ. ಲಸಿಕೆ ಕೊರತೆ ನೀಗಿಸಲು ಎಲ್ಲ ಪ್ರಯತ್ನ ನಡೆಸಲಾಗಿದ್ದು, ಎಲ್ಲರಿಗೂ ಲಸಿಕೆ ಸಿಗುತ್ತದೆ ಎಂದರು.
ಪ್ರತಿಪಕ್ಷಗಳು ಈ ಮೊದಲು ಸುಳ್ಳು ಪ್ರಚಾರ, ಅಪಪ್ರಚಾರವನ್ನು ಬಿಡಬೇಕು. ಸರ್ಕಾರ ಮತ್ತು ಅಧಿಕಾರಿಗಳು ಹಗಲು-ರಾತ್ರಿ ಕೆಲಸ ಮಾಡುತ್ತಿದ್ದಾರೆ. ಕೋವಿಡ್ ಸ್ಥಿತಿ ನಿರ್ವಹಣೆಗೆ ಸಲಹೆ ಸೂಚನೆ ನೀಡಬೇಕು, ಸುಳ್ಳು, ಅಪಪ್ರಚಾರ ಹಾಗೂ ರಾಜಕೀಯ ಮಾಡದೆ ಕೊರೊನಾ ವಿಚಾರದಲ್ಲಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದರು.