ಚಿಕ್ಕೋಡಿ: ಪ್ರಕಾಶ್ ಹುಕ್ಕೇರಿ ಅವರು ಒಳ್ಳೆಯ ಕೆಲಸ ಮಾಡಿದ್ದಾರೆ. ಚಿಕ್ಕೋಡಿ ತಾಲೂಕಿನಲ್ಲಿ ಪ್ರಕಾಶ್ ಹುಕ್ಕೇರಿ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಲಿದ್ದಾರೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಕಾಶ್ ಹುಕ್ಕೇರಿ ಆಹ್ವಾನದ ಮೇರೆಗೆ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಅವರು ತಮ್ಮ ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ. ಹೀಗಾಗಿ ಗ್ರಾಪಂ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವುದು ನಿಶ್ಚಿತ ಎಂದರು.
ಬೆಳಗಾವಿ ಲೋಕಸಭೆ ಉಪಚುನಾವಣೆ ಅಭ್ಯರ್ಥಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬೆಳಗಾವಿ ಲೋಕಸಭೆಗೆ 7-8 ಜನ ಟಿಕೆಟ್ ಕೇಳಿದ್ದಾರೆ. ಇದರಲ್ಲಿ 3 ಅಭ್ಯರ್ಥಿಗಳ ವರದಿಯನ್ನು ಅಧ್ಯಕ್ಷರಿಗೆ ಕಳುಹಿಸಲಾಗಿದೆ. ಅವರು ಎಐಸಿಸಿಗೆ ಕಳುಹಿಸಿ, ಹೈಕಮಾಂಡ್ ಪರವಾನಗಿ ಪಡೆದ ನಂತರ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು ಎಂದರು.
ಸಿದ್ದರಾಮಯ್ಯನವರಿಗೆ ಸ್ವಪಕ್ಷದವರೇ ಸೋಲಿಸಿದ್ದಾರೆ ಎನ್ನುವ ವಿಚಾರವಾಗಿ ಪ್ರತಿಕ್ರಿಯಿಸಿ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕೆಲ ವಿರೋಧ ಮಾಡಿದವರು ಮುಂದೆ ಕುಳಿತಿದ್ದರು. ಆ ನೋವಿನಿಂದ ಸಿದ್ದರಾಮಯ್ಯನವರು ಈ ರೀತಿ ಹೇಳಿದ್ದಾರೆ. ನಿನ್ನೆ ನನಗೂ ಕೂಡ ಸಿದ್ದರಾಮಯ್ಯನವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿನ ಸೋಲಿನ ಬಗ್ಗೆ ಹೇಳಿದ್ದಾರೆ ಎಂದರು.
ಸಿದ್ದರಾಮಯ್ಯನವರೇ ಮುಂದಿನ ಮುಖ್ಯಮಂತ್ರಿ ಆಗ್ತಾರಾ ಎನ್ನುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮೊದಲು ನಾವು ಚುನಾವಣೆ ಗೆದ್ದು ಅಧಿಕಾರಕ್ಕೆ ಬರಬೇಕು. ಮುಖ್ಯಮಂತ್ರಿ ಅಭ್ಯರ್ಥಿಯನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.