ಬೆಳಗಾವಿ : ಬಿಜೆಪಿ ಸುಳ್ಳು ಭರವಸೆಗಳನ್ನೇ ನೀಡಿ ಅಧಿಕಾರಕ್ಕೆ ಬಂದಿದೆ. ಅವರನ್ನು ನಂಬಿ ಮತ ಹಾಕಿದ ಜನರು ಇಂದು ಪಶ್ಚಾತಾಪ ಪಡುವಂತಾಗಿದೆ ಎಂದು ಮಾಜಿ ಸಚಿವ ಎಂ ಬಿ ಪಾಟೀಲ್ ವಾಗ್ದಾಳಿ ನಡೆಸಿದರು.
ಲೋಕಸಭೆ ಉಪಚುನಾವಣೆ ಹಿನ್ನೆಲೆ ನಡೆದ ತಾಲೂಕಿನ ಸಾಂಬ್ರಾ ವ್ಯಾಪ್ತಿಯ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬೆಳಗಾವಿ ಕ್ಷೇತ್ರದಿಂದ ಸ್ಪರ್ಧಿಸಿರುವ ಸತೀಶ್ ಜಾರಕಿಹೊಳಿ ಒಬ್ಬ ಪ್ರಭಾವಿ ನಾಯಕರು. ತಮ್ಮದೇ ಆದ ಅಭಿವೃದ್ಧಿಯ ಕನಸನ್ನು ಹೊಂದಿದ್ದಾರೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಇಂತಹ ನಾಯಕರ ಅಗತ್ಯವಿದೆ. ಹಾಗಾಗಿ, ಅವರನ್ನು ಗೆಲ್ಲಿಸಲು ಎಲ್ಲರೂ ಸೇರಿ ಪ್ರಯತ್ನ ಮಾಡಬೇಕು ಎಂದರು.
ಓದಿ : ಬಿಜೆಪಿ ನೇತೃತ್ವದ ಕೇಂದ್ರ, ರಾಜ್ಯ ಸರ್ಕಾರದಿಂದ ಸಿಡಿ ಲೇಡಿಗೆ ಅನ್ಯಾಯ: ಶಾಸಕಿ ಅಂಜಲಿ ನಿಂಬಾಳ್ಕರ್
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ, ಸತೀಶ್ ಜಾರಕಿಹೊಳಿ ಅವರು ಕಾಂಗ್ರೆಸ್ ಪಕ್ಷದ ಒಮ್ಮತದ ಅಭ್ಯರ್ಥಿ. ಅವರನ್ನು ಕಣಕ್ಕಿಳಿಸುವುದಕ್ಕೆ ಯಾರೊಬ್ಬರೂ ಆಕ್ಷೇಪ ವ್ಯಕ್ತಪಡಿಸಲಿಲ್ಲ. ಅವರ ನಾಯಕತ್ವ ಎಂತಹದ್ದು ಅನ್ನೋದು ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೆ ಎಲ್ಲರಿಗೂ ಗೊತ್ತಿದೆ. ಅವರನ್ನು ಈ ಬಾರಿ ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಆಯ್ಕೆ ಮಾಡೋಣ ಎಂದು ಹೇಳಿದರು.
ಶಾಸಕ ಗಣೇಶ್ ಹುಕ್ಕೇರಿ ಮಾತನಾಡಿ, ಕಾಂಗ್ರೆಸ್ ಸಾಮಾನ್ಯ ಜನರ ಕಷ್ಟಕ್ಕೆ ಸ್ಪಂದಿಸುವ ಪಕ್ಷ. ಬಿಜೆಪಿಗೆ ಜನರ ನೋವು ಅರ್ಥವಾಗುವುದಿಲ್ಲ. ಎಲ್ಲಾ ವಸ್ತುಗಳ ಬೆಲೆ ವಿಪರೀತ ಏರುತ್ತಿದ್ದರೂ ಸ್ಪಂದಿಸುತ್ತಿಲ್ಲ. ಜನರು ಇದರಿಂದ ತತ್ತರಿಸಿ ಹೋಗಿದ್ದಾರೆ. ಹಾಗಾಗಿ, ಈ ಬಾರಿ ಸತೀಶ್ ಜಾರಕಿಹೊಳಿ ಅವರನ್ನು ಬಹುಮತದಿಂದ ಆಯ್ಕೆ ಮಾಡಿ ಕಳಿಸಬೇಕೆಂದು ಮತದಾರರಲ್ಲಿ ಮನವಿ ಮಾಡಿಕೊಂಡರು.