ಬೆಳಗಾವಿ: ರಾಜ್ಯ ವಿಧಾನಸಭಾ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ಎರಡನೇ ಪಟ್ಟಿಯಲ್ಲಿ 42 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಅಧಿಕೃತವಾಗಿ ಇಂದು ಘೋಷಣೆ ಮಾಡಲಾಗಿದೆ. ಅದರಲ್ಲಿ ಬೆಳಗಾವಿ ಜಿಲ್ಲೆಯ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಸಹ ಪ್ರಕಟವಾಗಿದೆ.
ಹೌದು, ತೀವ್ರ ಕುತೂಹಲ ಮೂಡಿಸಿದ್ದ ಕಿತ್ತೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ಗಾಗಿ ಮಾಜಿ ಸಚಿವ ಡಿ ಬಿ ಇನಾಮದಾರ್ ಹಾಗೂ ಬಾಬಾಸಾಹೇಬ ಪಾಟೀಲ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಬಾಬಾ ಸಾಹೇಬ ಪಾಟೀಲಗೆ ಮಣೆ ಹಾಕಿದ್ದು, ಟಿಕೆಟ್ ಘೋಷಿಸಲಾಗಿದೆ. ಅದೇ ರೀತಿ ಸವದತ್ತಿ ಕ್ಷೇತ್ರದಲ್ಲಿ ಈ ಬಾರಿಯೂ ವಿಶ್ವಾಸ್ ವೈದ್ಯಗೆ ಟಿಕೆಟ್ ಅನೌನ್ಸ್ ಆಗಿದೆ. ಟಿಕೆಟ್ ಆಕಾಂಕ್ಷಿಯಾಗಿದ್ದ ಪಂಚನಗೌಡ ದ್ಯಾಮನಗೌಡರ, ಸೌರಭ ಚೋಪ್ರಾಗೆ ನಿರಾಸೆ ಉಂಟಾಗಿದೆ.
ಇನ್ನು ನಿಪ್ಪಾಣಿಯಿಂದ ಮಾಜಿ ಶಾಸಕ ಕಾಕಾಸಾಹೇಬ ಪಾಟೀಲಗೆ ಟಿಕೆಟ್ ಸಿಕ್ಕಿದ್ದು, ಗೋಕಾಕ್ ಕ್ಷೇತ್ರದಿಂದ ಹೊಸ ಮುಖ ಮಹಾಂತೇಶ ಕಡಾಡಿಗೆ ಟಿಕೆಟ್ ಒಲಿದು ಬಂದಿದೆ. ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದ ಅಶೋಕ ಪೂಜಾರಿಗೆ ತೀವ್ರ ಮುಖಭಂಗವಾಗಿದೆ.
ಇದನ್ನೂ ಓದಿ : ಕಾಂಗ್ರೆಸ್ನಿಂದ 42 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ.. ಯಾವ ಕ್ಷೇತ್ರಕ್ಕೆ ಯಾರು ನೋಡಿ
ಜಿಲ್ಲೆಯ 18 ಕ್ಷೇತ್ರಗಳ ಪೈಕಿ ಎರಡೂ ಪಟ್ಟಿಯಲ್ಲಿ 13 ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿಗಳು ಘೋಷಣೆಯಾಗಿದ್ದು, ಆಕಾಂಕ್ಷಿಗಳು ಹೆಚ್ಚಾಗಿರುವ ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ, ಅಥಣಿ, ಅರಭಾವಿ, ರಾಯಬಾಗ ಕ್ಷೇತ್ರಗಳಿಗೆ ಇನ್ನೂ ಟಿಕೆಟ್ ಘೋಷಣೆಯಾಗಿಲ್ಲ. ಇದರಿಂದ ಆಕಾಂಕ್ಷಿಗಳಲ್ಲಿ ಮತ್ತಷ್ಟು ತಳಮಳ ಶುರುವಾಗಿದೆ. ಜೊತೆಗೆ, ಕಾಂಗ್ರೆಸ್ ಟಿಕೆಟ್ ವಂಚಿತರು ಬಂಡಾಯ ಏಳುವ ಸಾಧ್ಯತೆಯಿದ್ದು, ಈ ಅಸಮಾಧಾನವನ್ನು ಕಾಂಗ್ರೆಸ್ ಹೈಕಮಾಂಡ್ ಯಾವ ರೀತಿ ಶಮನ ಮಾಡುತ್ತದೆ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ : ಕಾಂಗ್ರೆಸ್ ಟಿಕೆಟ್: ಎರಡನೇ ಪಟ್ಟಿಯಲ್ಲೂ ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ಸಸ್ಪೆನ್ಸ್..!
ಈ ಹಿಂದೆ ಬಿಡುಗಡೆ ಮಾಡಿದ್ದ ಮೊದಲ ಪಟ್ಟಿಯಲ್ಲಿ ವರುಣಾದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕನಕಪುರದಿಂದ ಡಿಕೆ ಶಿವಕುಮಾರ್, ಕೊರಟಗೆರೆಯಿಂದ ಡಾ ಜಿ ಪರಮೇಶ್ವರ್ ಸೇರಿ 124 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್ ಘೋಷಿಸಿತ್ತು.
ಇದನ್ನೂ ಓದಿ : ಕರ್ನಾಟಕ ವಿಧಾನಸಭೆ ಚುನಾವಣೆ: ಮೇ 10ಕ್ಕೆ ಮತದಾನ, 13ಕ್ಕೆ ಫಲಿತಾಂಶ
ಯಾವಾಗ ಚುನಾವಣೆ ? : ರಾಜ್ಯ ವಿಧಾನಸಭೆ 2023ರ ಚುನಾವಣೆಗೆ ಈಗಾಗಲೇ ದಿನಾಂಕ ಘೋಸಿಸಲಾಗಿದೆ. ವಿಧಾನಸಭೆಯ 224 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಎಲೆಕ್ಷನ್ ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ - ಏಪ್ರಿಲ್ 20 ಆಗಿದ್ದು, ನಾಮಪತ್ರ ಪರಿಶೀಲನೆ ಏಪ್ರಿಲ್ 21 ರಂದು ನಡೆಯಲಿದೆ. ನಾಮಪತ್ರ ವಾಪಸ್ಗೆ ಏಪ್ರಿಲ್ 24 ಕೊನೆಯ ದಿನವಾಗಿದೆ. ಮೇ 10 ರಂದು ಮತದಾನ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ. ಈಗಾಗಲೇ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ.